ರಾಮೇಶ್ವರಂ ಕೆಫೆಯಿಂದ ಪೊಂಗಲ್ ಆರ್ಡರ್ ಮಾಡಿದ್ದು, ಆರ್ಡರ್ ಮಾಡಿದ ಆಹಾರದ ಮೂಲ ಬೆಲೆ 115 ರೂ., ಆದರೆ ಸ್ವಿಗ್ಗಿ ಪ್ಲಾಟ್‌ಫಾರ್ಮ್ ಮೂಲಕ ಆರ್ಡರ್ ಮಾಡಿಕೊಂಡು ತರಿಸಿದಾಗ ಒಟ್ಟು ಬಿಲ್ 273 ರೂ. ಇತ್ತು. 115 ರೂ. ಪೊಂಗಲ್‌ಗೆ ₹158 ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ. ಇದರಿಂದ ಆಹಾರದ ಬೆಲೆಗಿಂತಲೂ ಹೆಚ್ಚು ಮೊತ್ತವನ್ನು ಡೆಲಿವರಿ ಹಾಗೂ ಇತರೆ ಶುಲ್ಕಗಳ ಹೆಸರಿನಲ್ಲಿ ಪಡೆಯಲಾಗುತ್ತಿದೆ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಫುಡ್ ಡೆಲಿವರಿ ಸೇವೆಗಳಲ್ಲಿ ಡೆಲಿವರಿ ಚಾರ್ಜ್, ಪ್ಯಾಕಿಂಗ್ ಶುಲ್ಕ, ಪ್ಲಾಟ್‌ಫಾರ್ಮ್ ಫೀ, ಜಿಎಸ್‌ಟಿ ಸೇರಿದಂತೆ ಹಲವು ಹೆಚ್ಚುವರಿ ಶುಲ್ಕಗಳು ಸಾಮಾನ್ಯವಾಗಿದೆ. ಕೆಲವೊಮ್ಮೆ ಈ ಶುಲ್ಕಗಳು ಆಹಾರದ ಮೂಲ ಬೆಲೆಯನ್ನೇ ಮೀರಿದಾಗ ಗ್ರಾಹಕರಲ್ಲಿ ಅಸಮಾಧಾನ ಹುಟ್ಟುತ್ತದೆ. ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಈ ಅನುಭವವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸುಮಲತಾ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “115 ರೂ.ಬೆಲೆಯ ಪೊಂಗಲ್‌ಗೆ 273 ರೂ. ಯಾಕೆ, ಆಹಾರದ ಬೆಲೆಗಿಂತ ಡಬಲ್ ಚಾರ್ಜ್ ಮಾಡುವುದು ಸರಿಯೇ” ಎಂದು ಪ್ರಶ್ನಿಸಿದ್ದಾರೆ. ಗ್ರಾಹಕರಿಗೆ ಪಾರದರ್ಶಕವಾಗಿ ಬೆಲೆಯ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸುಮಲತಾ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟು ಹಾಕಿದೆ. ನೆಟ್ಟಿಗರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರೆ, ಹಲವರು ತಮ್ಮ ಅನುಭವಗಳನ್ನು ಹಂಚಿಕೊಂಡು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾಗಿ ತಿಳಿಸಿದ್ದಾರೆ.
ಸುಮಲತಾ ಅವರು ಬಿಲ್ ವಿವರಗಳನ್ನು ಪೋಸ್ಟ್‌ನಲ್ಲಿ ಹಾಕಿದ್ದು, ಪೊಂಗಲ್ (ಮೂಲ ಬೆಲೆ): ರೂ.115, ಪ್ಲಾಟ್ಫಾರ್ಮ್ ಫೀ: ಸುಮಾರು ರೂ.60-70, ಡೆಲಿವರಿ ಚಾರ್ಜ್: ರೂ. 50-60, ಪ್ಯಾಕಿಂಗ್ ಶುಲ್ಕ: ರೂ. 10-15 , ಜಿಎಸ್ಟಿ: ರೂ. 30-40. ಸ್ವಿಗ್ಗಿ ಕಂಪನಿಯು ಸುಮಲತಾ ಅವರ ಆಕ್ರೋಶಕ್ಕೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಸ್ವಿಗ್ಗಿಯ ಗ್ರಾಹಕ ಸೇವಾ ತಂಡವು ಸುಮಲತಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿ, ಸಮಸ್ಯೆಯನ್ನು ಪರಿಶೀಲಿಸುವುದಾಗಿ ತಿಳಿಸಿದೆ.


