ಆಂಧ್ರ ಪ್ರದೇಶದಲ್ಲಿ ಬಸ್ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಬಸ್‌ಗೆ ಬೆಂಕಿ ಹೊತ್ತಿಕೊಂಡು ಪ್ರಯಾಣಿಕರಲ್ಲಿ 13 ಮಂದಿ ಸಜೀವ ದಹನಗೊಂಡಿದ್ದಾರೆ. ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಏನಾಗುತ್ತಿದೆ ಎಂದು ತಿಳಿಯುವ ಮುನ್ನವೇ ಭಸ್ಮವಾಗಿ ಹೋಗಿದ್ದಾರೆ.
ರಾಯಲಸೀಮೆ ಪ್ರದೇಶದ ಮಾರ್ಕಪುರಂ ಜಿಲ್ಲೆಯ ರಾಯವರಂ ಸಮೀಪದ ಹಲಗೆ ಕ್ವಾರಿಯ ಬಳಿ ಈ ದುರಂತ ಸಂಭವಿಸಿದ್ದು, ಹರಿಕೃಷ್ಣ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ತೆಲಂಗಾಣದ ನಿರ್ಮಲ್‌ನಿಂದ ನೆಲ್ಲೂರಿನತ್ತ ಪ್ರಯಾಣಿಸುತ್ತಿತ್ತು. ಬೆಳಿಗ್ಗೆ 5ರಿಂದ 6 ಗಂಟೆ ನಡುವೆ ಪ್ರಯಾಣಿಕರು ಗಾಢ ನಿದ್ರೆಯಲ್ಲಿದ್ದಾಗ ಜಲ್ಲಿ ಲೋಡ್ ಆಗಿದ್ದ ಟಿಪ್ಪರ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್‌ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಉರಿದು ಹೋಗಿದೆ.
ಬಸ್‌ನಲ್ಲಿ 40 ಪ್ರಯಾಣಿಕರು ಇದ್ದರು ಎನ್ನಲಾಗಿದೆ. ಬಹುತೇಕರು ನಿದ್ರೆಯಲ್ಲಿದ್ದರಿಂದ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವಷ್ಟರಲ್ಲಿ ಬೆಂಕಿ ಇಡೀ ಬಸ್‌ಗೆ ಆವರಿಸಿದೆ. ಅನೇಕರು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಸಜೀವ ದಹನವಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 18 ರಿಂದ 20 ಗಾಯಾಳುಗಳನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಕೆಲವು ಪ್ರಯಾಣಿಕರನ್ನು ಬಸ್ ಕಿಟಕಿ ಒಡೆದು ಅದರ ಮೂಲಕ ಹೊರತೆಗೆದು ಜೀವ ಉಳಿಸಿದರು. ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವುದರಿಂದ ಇನ್ನೂ ಕೆಲವು ಶವಗಳು ಒಳಗೆ ಇರುವ ಸಾಧ್ಯತೆ ಇದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಘಟನೆಗೆ ಆಘಾತ ವ್ಯಕ್ತಪಡಿಸಿ, ಗಾಯಾಳುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.


