Menu

ಗಾಜಾದಲ್ಲಿ ತಂದೆ ಎದುರೇ ಮಗುವಿಗೆ ಚಿತ್ರಹಿಂಸೆ ನೀಡಿದ ಇಸ್ರೇಲ್‌ ಸೈನಿಕರು

ಮಾರ್ಚ್ 21 ರಂದು ಮಧ್ಯ ಗಾಜಾದ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಬಳಿ ಇಸ್ರೇಲ್ ಸೈನಿಕರು 18 ತಿಂಗಳ ಪ್ಯಾಲೇಸ್ಟಿನಿಯನ್ ಮಗುವನ್ನು 10 ಗಂಟೆ ಬಂಧನದಲ್ಲಿಟ್ಟು, ಕ್ರೂರವಾಗಿ ಚಿತ್ರಹಿಂಸೆ ನೀಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.

ತಂದೆಯಿಂದ ಬಲವಂತದ ತಪ್ಪೊಪ್ಪಿಗೆ ಪಡೆಯಲು ಹಸುಗೂಸನ್ನು ಇಸ್ರೇಲ್‌ ಸೈನಿಕರು ದಾಳವಾಗಿ ಬಳಸಿಕೊಂಡಿರುವುದಕ್ಕೆ ಜಾಗತಿಕವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.  ಅಲ್ ಜಜೀರಾ ವರದಿ ಮಾಡಿರುವ ಪ್ರಕಾರ, ಮಧ್ಯ ಗಾಜಾದ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಬಳಿ ಒಸಾಮಾ ಅಬು ನಾಸರ್ 18 ತಿಂಗಳ ಮಗು ಕರೀಮ್ ಅಬು ನಾಸರ್ ಜೊತೆಗಿದ್ದಾಗ ಇಸ್ರೇಲ್ ರಕ್ಷಣಾ ಪಡೆ ದಾಳಿ ನಡೆಸಿದೆ. ಸೈನಿಕರು ಒಸಾಮಾ ಅವರನ್ನು ಬೆತ್ತಲೆಗೊಳಿಸಿ ತಪಾಸಣೆ ನಡೆಸಿ ಅವರ ಕಣ್ಣೆದುರೇ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದರು. ಮಗುವಿನ ತಾಯಿ ಮಾಧ್ಯಮಗಳ ಮುಂದೆ ತನ್ನ ಮಗುವಿನ ದೇಹದ ಮೇಲಿರುವ ಗಾಯದ ಗುರುತುಗಳನ್ನು ತೋರಿಸುತ್ತಾ ಕಣ್ಣೀರು ಹಾಕಿದ್ದಾರೆ. ಮಗುವಿನ ಚರ್ಮದ ಮೇಲೆ ಉರಿಯುತ್ತಿರುವ ಸಿಗರೇಟ್‌ನಿಂದ ಸುಟ್ಟ ಗಾಯಗಳಿವೆ. ಕಾಲಿನೊಳಗೆ ಮೊಳೆಯನ್ನು ಚುಚ್ಚಿ ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿದ್ದಾರೆ.

ವೈದ್ಯಕೀಯ ವರದಿಗಳು ಕೂಡ ಮಗುವಿನ ದೇಹದ ಮೇಲಿರುವ ರಂಧ್ರಗಳು ಮತ್ತು ಸುಟ್ಟ ಗಾಯಗಳನ್ನು ದೃಢಪಡಿಸಿವೆ. ರೆಡ್‌ ಕ್ರಾಸ್ ಸಂಸ್ಥೆಯ ಪ್ರಯತ್ನದ ನಂತರ 10 ಗಂಟೆ ನರಕಯಾತನೆ ಅನುಭವಿಸಿದ ಮಗು ಬಿಡುಗಡೆಯಾಗಿದ್ದು, ತಂದೆ ಒಸಾಮಾ ಇನ್ನೂ ಇಸ್ರೇಲ್ ಪಡೆಯ ವಶದಲ್ಲಿದ್ದಾರೆ.

ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಪನೀಸ್ ಅವರು, ಒಬ್ಬ ತಂದೆಯನ್ನು ಮಣಿಸಲು ಹಸುಗೂಸಿಗೆ ಚಿತ್ರಹಿಂಸೆ ನೀಡುವ ಇವರು ಎಂತಹ ವಿಕೃತರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೆರಿಕದ ಕೌನ್ಸಿಲ್ ಫಾರ್ ಅಮೆರಿಕನ್ ಇಸ್ಲಾಮಿಕ್ ರಿಲೇಶನ್ಸ್ ಈ ಕೃತ್ಯವನ್ನು ನೈತಿಕ ಅಧಃಪತನ ಎಂದು ಬಣ್ಣಿಸಿದ್ದು, ಇಸ್ರೇಲ್‌ಗೆ ನೀಡುತ್ತಿರುವ ಮಿಲಿಟರಿ ನೆರವನ್ನು ನಿಲ್ಲಿಸುವಂತೆ ಅಮೆರಿಕ ಸರ್ಕಾರವನ್ನು ಒತ್ತಾಯಿಸಿದೆ.

Related Posts

Leave a Reply

Your email address will not be published. Required fields are marked *