ಅಮೆರಿಕ ಜೊತೆ ಮಾತುಕತೆ ನಡೆಸಲು ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಒಪ್ಪಿಕೊಂಡಿದ್ದಾರೆ ಎಂದು ಸೌದಿ ಸರ್ಕಾರದ ಅಲ್ ಅರೇಬಿಯಾ ಮಾಧ್ಯಮ ವರದಿ ಮಾಡಿದೆ. ಈ ವರದಿಗೆ ಸಂಬಂಧಿಸಿ ಇರಾನ್ ಕಡೆಯಿಂದ ಪ್ರತಿಕ್ರಿಯೆ ಬಂದಿಲ್ಲ.
ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಟ್ರಂಪ್, ಇರಾನ್ ಜೊತೆ ಕಳೆದ ಎರಡು ದಿನಗಳಲ್ಲಿ ಉತ್ತಮ ಮಾತುಕತೆ ನಡೆದಿದೆ. ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಇಂಧನ ಮೂಲಸೌಕರ್ಯಗಳ ಮೇಲಿನ ಎಲ್ಲಾ ಸೇನಾ ದಾಳಿಗಳನ್ನು ಐದು ದಿನಗಳ ಅವಧಿಗೆ ಮುಂದೂಡಲು ಸೂಚನೆ ನೀಡಿದ್ದೇನೆ ಎಂದು ಪೋಸ್ಟ್ ಮಾಡಿದ್ದರು.
ಇದಕ್ಕೂ ಮೊದಲು ಟ್ರಂಪ್, 48 ಗಂಟೆಗಳಲ್ಲಿ ಹರ್ಮುಜ್ ಜಲಸಂಧಿ ತೆರೆಯದಿದ್ದರೆ ನಿಮ್ಮ ವಿದ್ಯುತ್ ಸ್ಥಾವರ ನಾಶ ಮಾಡುವುದಾಗಿ ಇರಾನಿಗೆ ಬೆದರಿಕೆ ಹಾಕಿದ್ದರು. ಅಮೆರಿಕದ ಬೆದರಿಕೆಗೆ ಜಗ್ಗದ ಇರಾನ್, ಒಂದು ವೇಳೆ ನಮ್ಮ ಇಂಧನ, ವಿದ್ಯುತ್ ಮೂಲಸೌಕರ್ಯಗಳನ್ನು ನಾಶ ಮಾಡಿದರೆ ಮಧ್ಯಪ್ರಾಚ್ಯದಲ್ಲಿರುವ ಇತರ ದೇಶಗಳ ಇಂಧನ, ವಿದ್ಯುತ್ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುತ್ತೇವೆ ಎಂದು ತಿರುಗೇಟು ನೀಡಿತ್ತು. ಈ ಎಲ್ಲ ಬೆಳವಣಿಗೆಗಳ ಬಳಿಕ ಟ್ರಂಪ್ ಐದು ದಿನ ಕದನ ವಿರಾಮ ಘೋಷಣೆ ಮಾಡಿದ್ದಾರೆ.
ನಾವು ನೀಡಿದ ಎಚ್ಚರಿಕೆಗೆ ತಲೆಬಾಗಿ ಅಮೆರಿಕ ಕದನ ವಿರಾಮ ಘೋಷಣೆ ಮಾಡಿದೆ ಎಂದು ಇರಾನ್ ಟ್ರಂಪ್‌ಗೆ ತಿರುಗೇಟು ನೀಡಿದೆ. ಇರಾನ್‌ನ ಇಂಧನ ಮೂಲಸೌಕರ್ಯದ ಮೇಲೆ ಅಮೆರಿಕ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ. ಒಂದು ವೇಳೆ ನಮ್ಮ ಮೂಲಸೌಕರ್ಯದ ಮೇಲೆ ದಾಳಿ ಮಾಡಿದರೆ ಇಡೀ ಪ್ರದೇಶದ ಮೂಲ ಸೌಕರ್ಯದ ಮೇಲೆ ದಾಳಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದೆವು. ಈ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ದಾಳಿಯಿಂದ ಹಿಂದಕ್ಕೆ ಸರಿದಿದ್ದಾರೆ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದೆ.
ಡೆಡ್‌ಲೈನ್ ಒಳಗಡೆ ಇರಾನ್ ಹರ್ಮುಜ್ ಜಲಸಂಧಿ ತೆರೆಯದೇ ಇದ್ದರೆ ದೊಡ್ಡ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇತ್ತು. ಇರಾನ್ ಬೆದರಿಕೆಗೆ ಜಗ್ಗದ ಕಾರಣ ದೊಡ್ಡ ಪ್ರಮಾಣದ ದಾಳಿ ನಡೆಯಬಹುದು ಎಂದು ಊಹಿಸಿ ಟ್ರಂಪ್ ಕದನ ವಿರಾಮ ಘೋಷಣೆ ಮಾಡಿದ್ದಾರೆಎಂದು ಹೇಳಲಾಗುತ್ತಿದೆ.


