15 ದಿನದ ಹೆಣ್ಣು ಶಿಶು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೆಣ್ಣುಮಗು ಎಂಬ ಕಾರಣಕ್ಕೆ ತಂದೆಯೇ ವಿಷವುಣಿಸಿರುವುದನ್ನು ಖಚಿತಪಡಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಕಾಕತಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಭೀಮರಾಯ ಚಿಪ್ಪಾಡೆ ಬಂಧಿತ ತಂದೆ. ಮಾ.17ರಂದು ಬೆಳಗಾವಿ ತಾಲೂಕಿನ ಉಕ್ಕಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಕತಿ ಪೊಲೀಸ್ ಠಾಣೆಗೆ ಮಗುವಿನ ತಾಯಿ ಶೀಲಾ ದೂರು ನೀಡಿದ್ದರು.
ಮಾರ್ಚ್ 17ರಂದು 15 ದಿನಗಳ ಹಿಂದೆ ಜನಿಸಿದ್ದ ಮಗು ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿತ್ತು. ಮಗುವಿನ ಸಾವಿಗೆ ತಂದೆಯೇ ಕಾರಣ ಎಂಬ ಗಂಭೀರ ಆರೋಪನ್ನು ಕುಟುಂಬಸ್ಥರೇ ಮಾಡಿದ್ದರು. ಒಂದು ವರ್ಷದ ಹಿಂದೆ ಭೀಮರಾಯ ಶೀಲಾರನ್ನು ಮದುವೆ ಆಗಿದ್ದ.. ಕೂಲಿ ಕೆಲಸ ಮಾಡಿಕೊಂಡಿದ್ದ ಭೀಮರಾಯಗೆ ಗಂಡು ಮಕ್ಕಳೆಂದರೆ ಹುಚ್ಚು. ಹೆಣ್ಣು ಮಗು ಆಗಿದ್ದಕ್ಕೆ ನೊಂದುಕೊಂಡಿದ್ದ. ಪತ್ನಿಯ ತವರು ಮನೆಗೆ ಬಂದಿದ್ದ ಭೀಮರಾಯ ಮಗು ನೋಡಿ ವಾಪಾಸ್ ಹೋಗಿದ್ದ, ಆತ ಹೋಗ್ತಿದ್ದಂತೆ ಮಗು ಅಸ್ವಸ್ಥಗೊಂಡಿತ್ತು. ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಷ್ಟರಲ್ಲಿ ಮಗು ಮೃತಪಟ್ಟಿತ್ತು. ಹತ್ತಿ ಬೆಳೆಗೆ ಸಿಂಪಡಣೆ ಮಾಡುವ ಔಷಧಿಯನ್ನು ಮಗುವಿಗೆ ಉಣಿಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿತ್ತು.
ಸ್ಥಳಕ್ಕೆ ಡಿಸಿಪಿ ನಾರಾಯಣ್ ಭರಮನಿ, ಬೆಳಗಾವಿ ಗ್ರಾಮೀಣ ಎಸಿಪಿ ಹಾಗೂ ಕಾಕತಿ ಸಿಪಿಐ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಆರೋಪ ಎದುರಿಸುತ್ತಿದ್ದ ಪತಿ ಭೀಮರಾಯ ನಾಪತ್ತೆ ಆಗಿದ್ದ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.


