ದೇವಸ್ಥಾನಗಳ ಅರ್ಚಕರೊಂದಿಗೆ ಸ್ನೇಹ ಬೆಳೆಸಿ ನಂಬಿಸಿ ಅವರ ಮನೆಯ ಮಹಿಳೆಯರಿಂದ ಚಿನ್ನಾಭರಣ ಎಗರಿಸಿ ಪರಾರಿಯಾಗುತ್ತಿದ್ದ ಪ್ರವೀಣ್ ಭಟ್ ಎಂಬಾತನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿಯ ಸೋಗಿನಲ್ಲಿ ಅರ್ಚಕರ ಪರಿಚಯ ಮಾಡಿಕೊಂಡು ಹೊಸ ಅಂಗಡಿ ಪೂಜೆಗೆ ಮುತ್ತೈದೆಯರು ಬೇಕು ಎಂದು ನಂಬಿಸಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ. ಅವನಿಂದ 15 ಲಕ್ಷ ರೂ. ಮೌಲ್ಯದ 116 ಗ್ರಾಂ ಚಿನ್ನ ಹಾಗೂ 409 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಪ್ರಸಿದ್ಧ ದೇವಸ್ಥಾನಗಳ ಅರ್ಚಕರೊಂದಿಗೆ ಸ್ನೇಹ ಬೆಳೆಸಿ ಪೂಜೆ ಮಾಡಿಸಿ, ದೇವಸ್ಥಾನಕ್ಕೆ ಸಾವಿರಾರು ರೂಪಾಯಿ ದೇಣಿಗೆ ನೀಡುವ ಮೂಲಕ ವಿಶ್ವಾಸ ಗಳಿಸುತ್ತಿದ್ದ. ಬಳಿಕ ಹೊಸ ಅಂಗಡಿ ಉದ್ಘಾಟನೆಗಾಗಿ ವಿಶೇಷ ಪೂಜೆ ಮಾಡಬೇಕೆಂದು ಹೇಳಿ ಮುತ್ತೈದೆಯರು ಬೇಕು ಎಂದು ಅರ್ಚಕರ ಮನೆಯವರನ್ನು ಕಳುಹಿಸುವಂತೆ ಕೇಳುತ್ತಿದ್ದ. ಕೆಲವು ಅರ್ಚಕರು ಪತ್ನಿಯನ್ನು ಕಳುಹಿಸುತ್ತಿದ್ದರು. ಪೂಜೆಗೆ ಮಹಿಳೆಯರನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದ ಆರೋಪಿ, ಒಡವೆಗಳನ್ನು ಹಾಕಿಕೊಳ್ಳಬೇಡಿ, ನನ್ನ ಬಳಿ ಕೊಡಿ, ನಂತರ ಕೊಡುತ್ತೇನೆ ಎಂದು ಹೇಳಿ ಪಡೆದುಕೊಳ್ಳುತ್ತಿದ್ದ. ಬಳಿಕ ಮಧ್ಯದಲ್ಲೇ ಮಹಿಳೆಯರನ್ನು ಬಿಟ್ಟು ಪರಾರಿಯಾಗುತ್ತಿದ್ದ. ಇದೇ ರೀತಿ ಐದಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಂಚನೆ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.
ಹೆಬ್ಬಾಳ, ರಾಮಮೂರ್ತಿನಗರ, ಸಿಟಿ ಮಾರ್ಕೆಟ್, ರಾಜಾಜಿನಗರ ಹಾಗೂ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಗಳಲ್ಲಿ ಪ್ರವೀಣ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


