ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ಸಂಘ ಸಂಸ್ಥೆ (ಸರ್ಕಾರಿ ಹಾಗೂ ಖಾಸಗಿ) ಗಳಲ್ಲಿ ಕನ್ನಡ ಧ್ವಜಾರೋಹಣ ಕಡ್ಡಾಯ ಆದೇಶ ಹೊರಡಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದ ಆವರಣದಲ್ಲಿ ನೂತನವಾಗಿ ಪ್ರತಿಷ್ಟಾಪಿಸಿರುವ ಭುವನೇಶ್ವರಿಯ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಮಾತನಾಡಿದರು.
ನಮ್ಮ ಮಾತೃಭಾಷೆ, ಈ ನೆಲ, ಜಲ ಕಾಪಾಡಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ. ಬೆಂಗಳೂರಿನಲ್ಲಿ 107 ಭಾಷೆ ಮಾತನಾಡುವ ಜನರಿದ್ದಾರೆ. ಕಳೆದ ವರ್ಷ ಎಲ್ಲಾ ಸಂಘ ಸಂಸ್ಥೆಗಳಲ್ಲೂ ನವೆಂಬರ್ 1 ರಂದು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕನ್ನಡದ ಧ್ವಜ ಹಾರಿಸುವಂತೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದೆ. ಮುಂದಿನ ದಿನಗಳಲ್ಲಿ ಇದನ್ನು ಕಡ್ಡಾಯ ಮಾಡುವ ಆದೇಶವನ್ನು ಹೊರಡಿಸಲಾಗುವುದು ಎಂದಿದ್ದಾರೆ.
ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಅಥವಾ ಪಾಲಿಕೆ ವತಿಯಿಂದ ಎಲ್ಲಾ ಸಂಸ್ಥೆಗಳಿಗೂ ಕನ್ನಡ ಬಾವುಟ ಪೂರೈಸುವ ಕೆಲಸ ಮಾಡುತ್ತೇವೆ. ಮಕ್ಕಳು ಶಾಲೆಗಳಲ್ಲಿ ಕನ್ನಡವನ್ನು ದ್ವಿತೀಯ ಭಾಷೆಯಾಗಿಯಾದರೂ ವ್ಯಾಸಂಗ ಮಾಡಬೇಕು. ಕನ್ನಡ ಸಂಘ ಸಂಸ್ಥೆಗಳ ಮೂಲಕ ನೀವೆಲ್ಲ ಭಾಷೆ ಉಳಿಯಲು ಹೋರಾಟ ಮಾಡುತ್ತಿದ್ದೀರಿ. ದೇಶದ ಬೇರೆ ರಾಜ್ಯಗಳಲ್ಲಿ ನಾಡಗೀತೆ, ನಾಡಧ್ವಜವಿಲ್ಲ. ಇದು ಕರ್ನಾಟಕದಲ್ಲಿ ಮಾತ್ರ ಇದೆ ಎಂದರು.
ಕನ್ನಡೇ ನಮ್ಮ ದೇವ ಭಾಷೆ, ತುಂಗಾ, ಭದ್ರ, ಕೃಷ್ಣ, ಕಾವೇರಿ ಎಲ್ಲಾ ನದಿಗಳು ನಮ್ಮ ಪಾಲಿನ ಪುಣ್ಯ ತೀರ್ಥಗಳು. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ, ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಅದು ಜೀವಂತವಾಗಿ ಉಳಿಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ ಬಗ್ಗೆ ಅಪಾರದ ಕಾಳಜಿ ಹೊಂದಿದ್ದಾರೆ. ಸಚಿವ ಸಂಪುಟದಲ್ಲಿ ಯಾವುದೇ ವಿಚಾರ ಪ್ರಸ್ತಾಪ ಮಾಡಬೇಕಾದರೂ ಕನ್ನಡದ ಕಡತಗಳಲ್ಲೇ ಮಂಡಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ ಎಂದು ತಿಳಿಸಿದ್ದಾರೆ.