ಶಿವಮೊಗ್ಗ ತಾಲೂಕಿನ ಊರಗಡೂರಿನಲ್ಲಿ ಸೂಳೆಬೈಲು ಸರಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ (15) ಎಂಬಾತನನ್ನು ಅನ್ಯಕೋಮಿನವರು ಹತ್ಯೆ ಮಾಡಿರುವ ಪ್ರಕರಣ ಜಿಲ್ಲೆಯನ್ನು ಉದ್ವಿಗ್ನಗೊಳಿಸಿದ್ದು, ಜಿಲ್ಲಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಹಲ್ಲೆಗೈದ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಸೂಚನೆ ನೀಡಿದ್ದಾರೆ.
ಸೂಳೆಬೈಲು ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳಲಾಗುತ್ತಿತ್ತು. ಶಾಲೆಯಲ್ಲಿ ವಿಶೇಷ ತರಗತಿ ಮುಗಿಸಿ ರಾತ್ರಿ ಮನೆಗೆ ತೆರಳುವಾಗ ಸಂಕೇತ್‌ನ ಸ್ನೇಹಿತ ಗಿರೀಶ್ ಜೊತೆಗೆ ಅನ್ಯಕೋಮಿನ ಮೂವರು ಬಾಲಕರು ಜಗಳವಾಡುತ್ತಿದ್ದರು. ಜಗಳ ಬಿಡಿಸಲು ಹೋದಾಗ ಸಂಕೇತ್‌ನ ಎದೆಗೆ ಗುದ್ದಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಕೊಲೆ ಮಾಡಿದ ಬಾಲಕರು ಸಂಕೇತ್ ಜೊತೆ ಓದಿದವರು. ಆದರೆ ಎಸ್‌ಎಸ್‌ಎಲ್‌ಸಿ ಡ್ರಾಪ್ ಔಟ್ ಆಗಿದ್ದರು. ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಿಜೆಪಿ ಶಾಸಕ ಚನ್ನಬಸಪ್ಪ, ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.


