ದಾವಣಗೆರೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಸಾಲ ತೀರಿಸಲು ವೃದ್ಧೆಯೊಬ್ಬರನ್ನು ಹತ್ಯೆ ಮಾಡಿ ಚಿನ್ನ ದೋಚಿದ್ದ ಪ್ರಕರಣದಲ್ಲಿ ಆನ್‌ಲೈನ್ ಗೇಮ್ ವ್ಯಸನಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ನಿವಾಸಿ ಅಭಿಷೇಕ (23) ಬಂಧಿತ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಆರುಂಡಿ ಗ್ರಾಮದಲ್ಲಿ ಫೆಬ್ರವರಿ 2ರಂದು ಈ ಘಟನೆ ನಡೆದಿತ್ತು. ವೃದ್ಧೆ ಕಮಲಮ್ಮ (64) ಅವರ ಮನೆಗೆ ನುಗ್ಗಿ ಹತ್ಯೆ ಮಾಡಿ 8.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು.
ಆರೋಪಿ ಅಭಿಷೇಕ ಆನ್‌ಲೈನ್ ಗೇಮ್ ಆಡುತ್ತಾ 20ರಿಂದ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡದಿಂದ ಮನೆ ಬಿಟ್ಟು ರಾತ್ರಿ ವೇಳೆ ಬಸ್ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದ. ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದೇವರ ಹಬ್ಬ ನಡೆಯುತ್ತಿರುವುದನ್ನು ತಿಳಿದು ಫೆಬ್ರವರಿ 2ರಂದು ಗ್ರಾಮಕ್ಕೆ ತೆರಳಿದ್ದ.
ಹಬ್ಬದ ನಿಮಿತ್ತ ಚಿನ್ನಾಭರಣ ಧರಿಸಿಕೊಂಡು ದೇವಾಲಯಕ್ಕೆ ಬಂದಿದ್ದ ಕಮಲಮ್ಮ ಅವರನ್ನು ಗಮನಿಸಿದ್ದ ಆತ, ಅವರ ಮನೆ ಹಿಂಬಾಗಿಲಿನಿಂದ ಒಳನುಗ್ಗಿ ಅಡಗಿ ಕುಳಿತಿದ್ದಾನೆ. ರಾತ್ರಿ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿ, ಮಲಮ್ಮ ಅವರ ಚಿನ್ನಾ ಭರಣ ದೋಚಿ ಪರಾರಿಯಾಗಿದ್ದ. ದೋಚಿದ ಚಿನ್ನವನ್ನು ಶಿಕಾರಿಪುರದ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಹಣ ಪಡೆದಿದ್ದ, ಆ ಹಣದಿಂದ ಮತ್ತೆ ಆನ್‌ಲೈನ್ ಗೇಮ್ ಆಡಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


