Saturday, February 21, 2026
Menu

ಹೆಚ್ಚು ಲಾಭದ ಆಮಿಷವೊಡ್ಡಿ ಕೋಟ್ಯಾಂತರ ರೂ. ವಂಚಿಸಿ ವ್ಯಕ್ತಿ ಪರಾರಿ

ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ದೊರೆಯುತ್ತದೆ ಎಂದು ಆಮಿಷವೊಡ್ಡಿ ಬಡವರಿಂದ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿ ವ್ಯಕ್ತಿ ಪರಾರಿಯಾದ್ದು, ಬಳ್ಳಾರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ 200ಕ್ಕೂ ಹೆಚ್ಚು ಜನರು ದೂರು ದಾಖಲಿಸಿದ್ದಾರೆ.

ಬಳ್ಳಾರಿಯ ದೇವಿನಗರ ನಿವಾಸಿ ವೆಂಕಟೇಶ ಚೀಟಿ ವ್ಯವಹಾರ ಹೆಸರಿನಲ್ಲಿ 800ಕ್ಕೂ ಹೆಚ್ಚು ಜನರಿಂದ ಹಣ ಸಂಗ್ರಹಿಸಿದ್ದಾನೆ. ಒಬ್ಬರಿಂದ 10 ಸಾವಿರ ರೂಪಾಯಿಯಿಂದ ಹಿಡಿದು 1 ಕೋಟಿ ರೂಪಾಯಿವರೆಗೆ ಹಣ ಪಡೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆತ ಸಂಗ್ರಹಿಸಿದ ಒಟ್ಟು ಮೊತ್ತ ನೂರಾರು ಕೋಟಿಗೆ ತಲುಪಿರಬಹುದೆಂದು ಅಂದಾಜಿಸಲಾಗಿದೆ.

ಹಣ ಕಳೆದುಕೊಂಡವರಲ್ಲಿ ಟೀ ಅಂಗಡಿ ನಡೆಸುವವರು, ಬೀದಿ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಸೇರಿದಂತೆ ಬಡ ಹಾಗೂ ಮಧ್ಯಮ ವರ್ಗದರೇ ಹೆಚ್ಚಿ ಸಂಖ್ಯೆಯಲ್ಲಿದ್ದಾರೆ. ಮಕ್ಕಳ ಶಿಕ್ಷಣ, ಮಗಳ ಮದುವೆ, ಮನೆ ನಿರ್ಮಾಣ, ಹೋಟೆಲ್ ಆರಂಭಿಸುವ ಕನಸು ಸೇರಿದಂತೆ ವಿವಿಧ ಉದ್ದೇಶಗಳಿಗೆ ದುಡಿದು ಕೂಡಿಟ್ಟ ಹಣವನ್ನು ಹೆಚ್ಚಿನ ಬಡ್ಡಿ ಸಿಗುತ್ತದೆ ಎಂದು ನಂಬಿ ಹೂಡಿಕೆ ಮಾಡಿದ್ದಾರೆ.

ಕೋಟ್ಯಂತರ ರೂಪಾಯಿ ಸಂಗ್ರಹಿಸಿದ ಬಳಿಕ ವೆಂಕಟೇಶ ಕಳೆದ ತಿಂಗಳು ಪರಾರಿಯಾಗಿದ್ದು, ಈವರೆಗೆ ಸುಳಿವು ಪತ್ತೆಯಾಗಿಲ್ಲ. ಆರೋಪಿಯನ್ನು ಶೀಘ್ರ ಬಂಧಿಸಿ ಹಣ ವಾಪಸ್ ಕೊಡಿಸುವಂತೆ ವಂಚನೆಗೊಳಗಾದವರು ಪೊಲೀಸರನ್ನು ಆಗ್ರಹಿಸಿದ್ದಾರೆ. ವೆಂಕಟೇಶ ಕಾಣೆಯಾಗಿದ್ದಾನೆ ಎಂದು ಆತನ ಕುಟುಂಬಸ್ಥರು ದೂರು ದಾಖಲಿಸಿರುವುದು ಕುತೂಹಲ ಕೆರಳಿಸಿದೆ.

Related Posts

Leave a Reply

Your email address will not be published. Required fields are marked *