Wednesday, February 18, 2026
Menu

ಹಾಸನದಲ್ಲಿ ಎರಡು ಎಕರೆ ಆಸ್ತಿ ವಿವಾದ: ದಾಯಾದಿಗಳಿಂದ ವ್ಯಕ್ತಿ ಕೊಲೆ

ಹಾಸನದ ಆಲೂರು ತಾಲೂಕಿನ ರಾಜನಹಳ್ಳಿ ಸಮೀಪ ಎರಡು ಎಕರೆ ಆಸ್ತಿ ವಿವಾದ ತಾರಕಕ್ಕೆ ಏರಿ, ಕೋರ್ಟ್‌ ಮೆಟ್ಟಿಲೇರಿದ್ದ ವ್ಯಕ್ತಿಯನ್ನು ದಾಯಾದಿಗಳು ಸೇರಿ ಹತ್ಯೆ ಮಾಡಿದ್ದಾರೆ.

ಕೆಎಸ್‌ಆರ್‌ಟಿಸಿ ಹಾಸನ ಡಿಪೋದಲ್ಲಿ ಚಾಲಕರಾಗಿದ್ದ ವೀರಪ್ಪ (58) ಹತ್ಯೆಯಾದವರು. ಕೋರ್ಟ್‌ ಕೇಸ್ ಮುಗಿಸಿ ಬಂದ ಬಳಿಕ ಸಂಜೆ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವೀರಪ್ಪ ಸೇವೆಯಿಂದ ನಿವೃತ್ತಿಯ ಹಂತದಲ್ಲಿದ್ದರು. ಕೆಲವು ವರ್ಷಗಳ ಹಿಂದೆ ವೀರಪ್ಪನ ಚಿಕ್ಕಪ್ಪ ಬಾಗಲಯ್ಯ ಎರಡು ಎಕರೆ ಆಸ್ತಿಯನ್ನು ಅವರಿಗೆ ಕೊಡುವುದಾಗಿ ದಾನಪತ್ರ ನೀಡಿದ್ದರು. ಚಿಕ್ಕಪ್ಪನ ನಿಧನದ ಬಳಿಕ ಆಸ್ತಿ ವೀರಪ್ಪನ ಹೆಸರಿಗೆ ನೋಂದಣಿ ಆಗಿದೆ. ಆದರೆ ಆತನ ಮಕ್ಕಳಾದ ಮಲ್ಲಮ್ಮ, ಮಹದೇವಮ್ಮ ಮತ್ತು ಕುಟುಂಬಸ್ಥರು ಆಸ್ತಿ ಹಂಚಿಕೆ ವಿಚಾರವಾಗಿ ಕೋರ್ಟ್‌ಗೆ ಹೋಗಿದ್ದರು.

ಮಂಗಳವಾರ ಆಲೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವೀರಪ್ಪ ವಿಚಾರಣೆ ಮುಗಿಸಿ ಜಮೀನಿನ ಬಳಿ ತೆರಳಿದ್ದಾಗ ಹಿಂಬಾಲಿಸಿದ ಮಲ್ಲಮ್ಮನ ಮಕ್ಕಳಾದ ಹರೀಶ, ಪ್ರಕಾಶ ಮತ್ತು ಮಹದೇವಮ್ಮನ ಮಗನಾದ ಮಹದೇವ ಕೊಲೆ ಮಾಡಿದ್ದಾರೆ. ಮೃತದೇಹಕ್ಕೆ ಪೆಟ್ರೋಲ್ ಸುರಿದು ಸುಟ್ಟು ಹಾಕಿರುವುದಾಗಿ ಹೇಳಲಾಗಿದೆ.

ವೀರಪ್ಪನ ಪುತ್ರ ವಿವೇಕ್ ನೀಡಿದ ದೂರರು ಆಧರಿಸಿ ಮಲ್ಲಮ್ಮ, ಮಹದೇವಮ್ಮ, ಹರೀಶ್, ಲೋಕೇಶ್, ಮಹದೇವ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಆಲೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *