ಬೆಂಗಳೂರಿನಲ್ಲಿ ಯುವಕನೊಬ್ಬ ಸ್ನೇಹಿತರ ಜೊತೆಗೆ ತನ್ನ ಹುಟ್ಟುಹಬ್ಬವನ್ನು ಸಂಭ್ರಮಿಸಿ ಮನೆಗೆ ತೆರಳುತ್ತಿದ್ದಾಗ ನಡೆದ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆಯೊಂದು ನಡೆದಿದೆ.
ಬೈಕ್ ಹಾಗೂ ಅಶೋಕಾ ಲೈಲಾಂಡ್ ಡಿಕ್ಕಿಯಾಗಿ ಬೆಂಗಳೂರು ಉತ್ತರ ತೋಟದ ಗುಡ್ಡದಹಳ್ಳಿ ನಿವಾಸಿ ಪವನ್ (24) ಅಸು ನೀಗಿದ್ದಾನೆ. ಸಂಜೆ ಹುಟ್ಟುಹಬ್ಬ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಐವರಕಂಡಪುರದ ಬಳಿ ಈ ದುರಂತ ಸಂಭವಿಸಿದೆ.
ಸೋಲದೇವನಹಳ್ಳಿ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಶಾಲಾ ಬಸ್ ಹರಿದು ಮಗು ಸಾವು
ಖಾಸಗಿ ಶಾಲಾ ಬಸ್ ಹರಿದು ನಾಲ್ಕು ವರ್ಷದ ಗಂಡು ಮಗುಮೃತಪಟ್ಟಿರುವ ಘಟನೆ ಯಾದಗಿರಿ ಗುರುಮಠಕಲ್ ತಾಲೂಕಿನ ಗಾಜರಕೋಟ್ ಗ್ರಾಮದಲ್ಲಿ ನಡೆದಿದೆ. ಪುನೀತ್ (4) ಮೃತಪಟ್ಟಿರುವ ಮಗು. ಆತ ಗಾಜರಕೋಟ್ ಗ್ರಾಮದಲ್ಲಿರುವ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಗುರುಮಠಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


