ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎಂಬ ವಿಚಾರದಲ್ಲಿ ಡಿಸಿಎಂ ಅವರು ಈಗಾಗಲೇ ಹೇಳಿದ್ದಾರೆ. ಅವರಷ್ಟು ತಿಳುವಳಿಕೆ ಇಲ್ಲ. ಅವರಷ್ಟು ದೊಡ್ಡವರು ನಾವಲ್ಲ. ಯತೀಂದ್ರ ಅವರು ಏನು ಹೇಳುತ್ತಾರೋ ಅದೇ ವೇದವಾಕ್ಯ ಎಂದು ಬಮೂಲ್ ಅಧ್ಯಕ್ಷ ಡಿಕೆ. ಸುರೇಶ್ ಕುಟುಕಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಯತೀಂದ್ರ ಸಿದ್ದಾಮಯ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ. ನಮಗೆ ಸಿಗುವ ನೋಟೀಸ್ ಯತೀಂದ್ರ ಅವರಿಗೆ ಏಕಿಲ್ಲ ಎಂಬ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಹೇಳಿರುವುದರಲ್ಲಿ ತಪ್ಪೇನಿಲ್ಲ. ಎಲ್ಲರಿಗೂ ಒಂದೇ ನೀತಿ ಇರಬೇಕು. ಅವರೇ ಹೈಕಮಾಂಡ್ ಆಗಿರುವುದರಿಂದ ಏನೂ ಸಮಸ್ಯೆ ಇಲ್ಲ” ಎಂದರು.
ರಾಜ್ಯ ಸರ್ಕಾರ ಬಿಜೆಪಿ ಮುಖಂಡನಿಗೆ ಸಚಿವ ಸ್ಥಾನಮಾನ ನೀಡಿದೆ ಎಂದು ಕೇಳಿದಾಗ, ಕಾಂಗ್ರೆಸ್ ಪಕ್ಷವು ಸರ್ವ ಧರ್ಮ, ಸರ್ವ ಪಕ್ಷಗಳ ನಾಯಕರನ್ನು ಒಳಗೊಂಡಿದೆ. ಇಲ್ಲಿ ಬಿಜೆಪಿ, ಜನತಾ ದಳ, ಬಿಎಸ್ ಪಿ ಸೇರಿದಂತೆ ಎಲ್ಲರೂ ಇದ್ದಾರೆ. ನಮ್ಮಲ್ಲಿ ಮೊದಲ ಆದ್ಯತೆ ಅವರಿಗೆ. ಹೊರಗಿನಿಂದ ಬಂದವರಿಗೆ ಮೊದಲ ಆದ್ಯತೆ, ಆಮೇಲೆ ಕಾಂಗ್ರಸಿಗರಿಗೆ ಆದ್ಯತೆ. ಅತಿಥಿಗಳನ್ನು ಗೌರವಿಸುವುದೇ ಕಾಂಗ್ರೆಸ್ ಪಕ್ಷದ ಗುರಿ ಎಂದು ಉತ್ತರಿಸಿದರು.
ನಿಮ್ಮ ಸಹೋದರ ದೆಹಲಿಯಲ್ಲಿದ್ದಾರೆ ಎಂದಾಗ, “ ಚುನಾವಣೆ ವಿಚಾರವಾಗಿ ಸಭೆ ಮಾಡಲು ಕರೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅವರು ಉಪಮುಖ್ಯಮಂತ್ರಿ ಆದಾಗ ಮಾತ್ರ ದೆಹಲಿಗೆ ಹೋಗುತ್ತಿಲ್ಲ. 40 ವರ್ಷಗಳಿಂದ ನಿರಂತರವಾಗಿ ದೆಹಲಿಗೆ ಹೋಗುತ್ತಿದ್ದಾರೆ. ತಿಂಗಳಿಗೆ ಒಂದು ಅಥವಾ ಎರಡು ಬಾರಿ ಹೋಗುತ್ತಾರೆ. ಈಗ ಅವರು ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳು ಸರ್ಕಾರದ ಕೆಲಸಗಳು ಇರುತ್ತವೆ. ಭದ್ರಾ ಮೇಲ್ದಂಡೆ ಯೋಜನೆ, ಬೆಂಗಳೂರಿನ ವಿಚಾರವಾಗಿ ಚರ್ಚೆ ಮಾಡುತ್ತಾರೆ. ಹೀಗಾಗಿ ದೆಹಲಿ ಪ್ರವಾಸ ಶಿವಕುಮಾರ್ ಅವರಿಗೆ ಹೊಸತಲ್ಲ ಎಂದು ತಿಳಿಸಿದರು.
ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ
ಕೆಎಂಎಫ್ ಚುನಾವಣೆಯಲ್ಲಿ ನಿಮ್ಮ ಜೊತೆಗೆ ಇನ್ನಿಬ್ಬರು ಶಾಸಕರು ಸ್ಪರ್ಧಿಸಲು ಆಕಾಂಕ್ಷಿಗಳಿದ್ದಾರೆ ಎಂದು ಕೇಳಿದಾಗ, “ನಾನು ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಲ್ಲ. ಪಕ್ಷ ಹಾಗೂ ಸರ್ಕಾರದ ತೀರ್ಮಾನದಂತೆ ಆಗುತ್ತದೆ. ಇದು ರಾಜ್ಯದ ರೈತರ ಜವಾಬ್ದಾರಿಯುತ ಸಂಸ್ಥೆ. ರೈತರ ಹಿತ ಕಾಯುವುದು ಮುಖ್ಯ. ಅದನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಹಾಗೂ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧ. ನನಗೆ ನನ್ನದೇ ಆದ ಜವಾಬ್ದಾರಿ ಇತಿ ಮಿತಿಗಳಿವೆ. ನಾನು ಯಾವುದನ್ನು ಆಸೆಪಟ್ಟು ಕೇಳುವುದಿಲ್ಲ, ಅದರ ಹಿಂದೆ ಹೋಗುವವನೂ ಅಲ್ಲ” ಎಂದರು.
ನಿಮಗೆ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೀರಾ ಎಂದಾಗ, ಇರುವ ಜವಾಬ್ದಾರಿ ನಿಭಾಯಿಸುವುದೇ ಕಷ್ಟ. ಈಗಾಗಲೇ ಅನೇಕ ಜವಾಬ್ದಾರಿಗಳಿವೆ. ನನಗೆ ವಿಶ್ರಾಂತಿ ಬೇಕು ಎಂದು ಕೇಳಿದವನು ನಾನು. ಜವಾಬ್ದಾರಿ ಬಂದಾಗ ಅದನ್ನು ನಿಭಾಯಿಸುವ ದೃಷ್ಟಿಕೋನ ಬಹಳ ಮುಖ್ಯ. ರೈತರ ಹಿತ, ನಂದಿನ ಬ್ರ್ಯಾಂಡ್ ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವುದು ಬಹಳ ಮುಖ್ಯ. ಖುಷಿಗಾಗಿ ಹೋಗಿ ಕೂರುವ ಸ್ಥಾನ ಅದಲ್ಲ ಎಂದು ತಿಳಿಸಿದರು.
ದೆಹಲಿ ಪ್ರಯಾಣದ ಬಗ್ಗೆ ಕೇಳಿದಾಗ, “ದೆಹಲಿಯಲ್ಲಿ ಡೈರಿಗೆ ಸಂಬಂಧಿಸಿದಂತೆ ವಸ್ತುಪ್ರದರ್ಶನ ನಡೆಯುತ್ತಿದ್ದು, ಅಧಿಕಾರಿಗಳು ಆಡಳಿತ ಮಂಡಳಿ ಸೇರಿ 20 ಜನರನ್ನು ಕರೆದುಕೊಂಡು ಹೋಗುತ್ತಿದ್ದೇನೆ. ರಾಜ್ಯದ ನಂದಿನಿಯನ್ನು ಭವಿಷ್ಯದಲ್ಲಿ ಪ್ರಗತಿಯ ಹಾದಿಯಲ್ಲಿ ಮುನ್ನಡೆಸಲು ಹೋಗುತ್ತಿದ್ದೇವೆ” ಎಂದರು. ದೆಹಲಿ ಪ್ರವಾಸದಲ್ಲಿ ರಾಜಕಾರಣ ಇದೆಯೇ ಎಂದು ಕೇಳಿದಾಗ, “ರಾಜಕಾರಣ ಏನಿಲ್ಲ. ಎಲ್ಲಾ ರಾಜಕಾರಣ ಕರ್ನಾಟಕದಲ್ಲಿ ಮಾಧ್ಯಮಗಳ ಬಳಿಯೇ ಇದೆ” ಎಂದು ಹೇಳಿದರು.
ನಾಯಕತ್ವ ಬದಲಾವಣೆ ಚರ್ಚೆ ವೇಳೆ ಬಜೆಟ್ ಗೂ ಮುನ್ನ ಕೆಲವು ಶಾಸಕರು ವಿದೇಶ ಪ್ರವಾಸಕ್ಕೆ ಮುಂದಾಗಿದ್ದಾರೆ ಎಂಬ ಪ್ರಶ್ನೆಗೆ, “ವಿದೇಶ ಪ್ರವಾಸಕ್ಕೆ ಹೋಗುತ್ತಿರುವವರು ಯಾರು? ಕರೆದುಕೊಂಡು ಹೋಗುವವರು ಯಾರು? ಯಾರೋ ಹೇಳಿದ್ದನ್ನು ಶಿವಕುಮಾರ್ ಅವರ ಮೇಲೆ ಯಾಕೆ ಹೇಳುತ್ತೀರಿ. ಶಿವಕುಮಾರ್ ಅವರಿಗೂ ಶಾಸಕರ ಪ್ರವಾಸಕ್ಕೆ ಯಾವುದೇ ಸಂಬಂಧವಿಲ್ಲ. ಶಾಸಕರ ಪ್ರವಾಸ ವೈಯಕ್ತಿಕವಾಗಿಯೂ ಇರಬಹುದು, ಪರಾಯೋಜಕತ್ವವೂ ಇರಬಹುದು. ಕೆಪಿಸಿಸಿ ಅಧ್ಯಕ್ಷರು ಹಾಗೂ ಡಿಸಿಎಂಗೂ ಈ ಪ್ರವಾಸಕ್ಕೂ ಸಂಬಂಧವಿಲ್ಲ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ನಮ್ಮ ಪಕ್ಷದವರು ಮಾಡುತ್ತಿದ್ದಾರೋ, ವಿರೋಧ ಪಕ್ಷದವರು ಮಾಡುತ್ತಿದ್ದಾರೋ ಗೊತ್ತಿಲ್ಲ. ಇದರಲ್ಲಿ ಶಿವಕುಮಾರ್ ಪಾಲುದಾರರಲ್ಲ” ಎಂದು ಸ್ಪಷ್ಟಪಡಿಸಿದರು.
ನೀವು ಹಾಗೂ ಶಿವಕುಮಾರ್ ಅವರು ತಾಳ್ಮೆ ಬಗ್ಗೆ ಮಾತನಾಡುತ್ತಿದ್ದಿರಿ ಎಂದು ಕೇಳಿದಾಗ, “ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ” ಎಂದ ಸುರೇಶ್, ಆ ಕಾಲ ಹತ್ತಿರಕ್ಕೆ ಬರುತ್ತಿದೆಯೇ ಎಂದು ಕೇಳಿದಾಗ, “ನಾನು ಹಾಗೆ ಭಾವಿಸಿದ್ದು, ನೀವುಗಳೂ ಹಾಗೇ ಭಾವಿಸಿಕೊಳ್ಳಿ” ಎಂದರು. ನೀವು ನಿಮ್ಮ ಸಹೋದರನಿಗೆ ಹೊಸ ಕಾರು ಉಡುಗೊರೆ ಕೊಟ್ಟಿದ್ದೀರಿ ಎಂದು ಕೇಳಿದಾಗ, “ಅದು ಸಾಹೇಬರಿಗೆ ಅಲ್ಲ” ಎಂದು ಉತ್ತರಿಸಿದರು.
ಜಿಬಿಎ ಚುನಾವಣೆ ಮತ್ತೆ ಮುಂದಕ್ಕೆ ಹೋಗುವ ಚರ್ಚೆ ಬಗ್ಗೆ ಕೇಳಿದಾಗ, “ಕಾಂಗ್ರೆಸ್ ಪಕ್ಷ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಮ್ಮ ಕ್ಷೇತ್ರಗಳಲ್ಲಿ ನಾವು ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಫಲಿತಾಂಶ ಒಳ್ಳೆಯದಾಗುತ್ತದೆಯೋ, ಕೆಟ್ಟದಾಗುತ್ತದೋ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಮಾಡಲೇ ಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ” ಎಂದರು.
ಸಿಎಂ ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ನೀವು ಹೇಳಿದ್ದಿರಿ ಎಂದು ಕೇಳಿದಾಗ, “ಸಿದ್ದರಾಮಯ್ಯ ಅವರು ಕೊಟ್ಟ ಮಾತಿನಂತೆ ನಡೆಯುತ್ತಾರೆ ಎಂದು ಇವತ್ತಿಗೂ ನನಗೆ ಭರವಸೆ ಇದೆ” ಎಂದು ಹೇಳಿದರು. ನಾವು ದೆಹಲಿಗೆ ಹೋದಾಗ ಹೈಕಮಾಂಡ್ ನಾಯಕರು ಸಿಕ್ಕಾಗೆಲ್ಲ ಭೇಟಿ ಮಾಡುತ್ತಲೇ ಇರುತ್ತೇವೆ. ಕೆಲವು ವಿಚಾರ ಚರ್ಚೆ ಮಾಡುತ್ತಲೇ ಇರುತ್ತೇವೆ. ಪಕ್ಷ, ಕ್ಷೇತ್ರ ಹಾಗೂ ಇತರೆ ವಿಚಾರ ಚರ್ಚೆ ಮಾಡುತ್ತೇವೆ. ಕೆಲವರು ನಿರ್ದಿಷ್ಟ ಕೆಲಸಕ್ಕಾಗಿ ದೆಹಲಿಗೆ ಹೋಗುತ್ತಾರೆ. ಶಿವಕುಮಾರ್ ಆ ವರ್ಗಕ್ಕೆ ಸೇರುವುದಿಲ್ಲ ಎಂದು ಉತ್ತರಿಸಿದರು.
ಶಿವಕುಮಾರ್ ಅವರ ಬೆಂಬಲಿಗ ಶಾಸಕರು ರೆಸಾರ್ಟ್ ಗೆ ತೆರಳುತ್ತಿದ್ದಾರೆ ಎಂದು ಕೇಳಿದಾಗ, “ನೀವೆಲ್ಲರೂ (ಮಾಧ್ಯಮಗಳು) ಕರೆದುಕೊಂಡು ಹೋಗಿ ಎಂದರೆ ಹೋಗುತ್ತಾರೆ” ತಿರುಗೇಟು ನೀಡಿದರು.
ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಹಗರಣ: ಕೇಂದ್ರ ಉತ್ತರಿಸಬೇಕು
ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಯೋಜನೆಯಲ್ಲಿನ ಹಗರಣ ನಡೆದಿದೆ ಎಂಬ ಸಿಎಜಿ ವರದಿ ಬಗ್ಗೆ ಕೇಳಿದಾಗ, “ ಈ ಹಣ ಎಲ್ಲಿ ಹೋಗಿದೆ ಎಂದು ಹುಡುಕಬೇಕಿದೆ. ಕರ್ನಾಟಕ ಮಾತ್ರವಲ್ಲ ದೇಶದಾದ್ಯಂತ ಈ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಇದಕ್ಕಾಗಿ ಲಕ್ಷಾಂತರ ಕೋಟಿ ವೆಚ್ಚ ಮಾಡಿದೆ. ಕೇಂದ್ರ ಸರ್ಕಾರ ಇಷ್ಟೆಲ್ಲಾ ಖರ್ಚು ಮಾಡಿದ್ದರೂ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ಯಾಕೆ ಇದೆ ಎಂದರೆ ಈ ಹಣ ಫಲಾನುಭವಿಗಳಿಗೆ ತಲುಪಿಲ್ಲ. ಇದರಲ್ಲಿ ಬಿಜೆಪಿ ನಾಯಕರ ಕೈವಾಡವಿದೆ. ಆರ್ ಎಸ್ಎಸ್ ಹಿನ್ನೆಲೆಯಲ್ಲಿ ಕೆಲಸ ಮಾಡುವ ಸಂಸ್ಥೆಗಳು ಇದರಲ್ಲಿ ಭಾಗಿಯಾಗಿವೆ” ಎಂದರು.
ಸಂಸತ್ತಿನಲ್ಲಿ ಪ್ರಧಾನಿ ಮೇಲೆ ಮಹಿಳಾ ಸಂಸದರು ಹಲ್ಲೆ ಮಾಡಲು ಮುಂದಾದರು ಎಂಬ ಆರೋಪದ ಬಗ್ಗೆ ಕೇಳಿದಾಗ, “ಸದನದ ಬಾವಿಗಿಳಿದು ಪ್ರತಿಭಟನೆ ಮಾಡುವುದು ಸದಸ್ಯರ ಹಕ್ಕು. ಸಂಸತ್ತಿನಲ್ಲೇ ಆಗಲಿ, ವಿಧಾನಮಂಡಲ ಅಧಿವೇಶನದಲ್ಲೇ ಆಗಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಾವಿಗಿಳಿದು ಹೋರಾಟ ಮಾಡಲು ಅವಕಾಶವಿದೆ. ಬಾವಿಗಿಳಿದು ಪ್ರಧಾನಿಮುಂದೆ ನಿಂತರು ಎಂದ ಮಾತ್ರಕ್ಕೆ ಪ್ರಧಾನಮಂತ್ರಿ ಮೇಲೆ ಹಲ್ಲೆ ಮಾಡುವ ಸಂಸದೆಯರು ಯಾರು ಇಲ್ಲ. ಪ್ರಧಾನಿ ಮುಂದೆ ನಿಂತ ಮಾತ್ರಕ್ಕೆ ಹಲ್ಲೆ ಮಾಡಿದಂತೆ ಅಲ್ಲ. ಕೇಂದ್ರ ಬಜೆಟ್ ನಲ್ಲಿ ಯಾವುದೇ ಯೋಜನೆಗಳು ಇಲ್ಲವಾದ ಕಾರಣ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡುತ್ತಿದ್ದಾರೆ. ಮಹಿಳಾ ಸಂಸದರು ಪ್ರಧಾನಿಗಳ ಮೇಲೆ ಹಲ್ಲೆ ಮಾಡುವ ಪರಿಸ್ಥಿತಿ ಇದೆಯಾ ಇಲ್ಲವೇ ಎಂದು ಆಲೋಚಿಸಬೇಕು. ಸ್ಪೀಕರ್ ಅವರು ನಿಷ್ಪಕ್ಷಪಾತವಾಗಿ ನ್ಯಾಯ ಸಮ್ಮತವಾಗಿ ತೀರ್ಪು ನೀಡಬೇಕು” ಎಂದು ಹೇಳಿದರು.
ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಏನೂ ಆಗುವುದಿಲ್ಲ. ಅವರಿಗೆ ಬಹುಮತವಿದೆ. ಹೀಗಾಗಿ ಅವಿಶ್ವಾಸ ನಿರ್ಣಯ ಸೋಲಲಿದೆ. ಹಾಗೆಂದ ಮಾತ್ರಕ್ಕೆ ಅವರ ಆರೋಪ ವಸ್ತು ಸ್ಥಿತಿಯೇ ಅಲ್ಲವೇ ಎಂಬುದು ಮುಖ್ಯ. ಅದು ವಸ್ತುಸ್ಥಿತಿಯಲ್ಲವಾದರೆ ಅವರು ಸುಳ್ಳು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಕ್ಷಮೆ ಕೋರಬೇಕು. ಲೋಕಸಭೆ ಘನತೆ ಎತ್ತಿ ಹಿಡಿಯಬೇಕಾಗಿರುವುದು ಸ್ಪೀಕರ್ ಅವರ ಕರ್ತವ್ಯ ಎಂದು ಆಗ್ರಹಿಸಿದರು. ರಾಷ್ಟ್ರಪತಿ ಭಾಷಣ ವಂದನಾ ನಿರ್ಣಯವನ್ನು ಪ್ರಧಾನಮಂತ್ರಿಗಳ ಉತ್ತರ ವಿಲ್ಲದೇ ಅಂಗೀಕಾರ ಮಾಡಿರುವ ಬಗ್ಗೆ ಕೇಳಿದಾಗ, “ಅದಕ್ಕೆ ಇನ್ನು ಸಮಯವಿದೆ. ಅವರು ಲೋಕಸಭೆಯಲ್ಲಿ ತಮಗೆ ಬೇಕಾದ ಬಿಲ್ ಅನುಮೋದನೆ ನೀಡುತ್ತಾರೆ. ಮಹಿಳಾ ಸಂಸದೆಯರ ಮೇಲೆ ಮಾಡಿರುವ ಆರೋಪ ನಿರಾಧಾರ, ರಾಜಕೀಯ ಪ್ರೇರಿತ” ಎಂದು ತಿಳಿಸಿದರು.


