Menu

ತಂದೆಯೇ ಐದು ವರ್ಷ ಸಿಎಂ ಆಗಿರ್ತಾರೆ: ಯತೀಂದ್ರ ಸಿದ್ದರಾಮಯ್ಯ

ನಮ್ಮ ತಂದೆಯವರೇ ಪೂರ್ಣ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಈಗಾಗಲೇ ಇದು ಹೈಕಮಾಂಡ್ ಮಟ್ಟದಲ್ಲಿ ತೀರ್ಮಾನವಾಗಿರುವ ವಿಚಾರ. ಹೈಕಮಾಂಡ್ ಈ ಬಗ್ಗೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯ ರಾಜಕಾರಣದಲ್ಲಿ ದೀರ್ಘಕಾಲದಿಂದ ಚರ್ಚೆಯಾಗುತ್ತಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ತೆರೆ ಎಳೆದಂತೆ ಹೇಳಿಕೆ ನೀಡಿದ್ದಾರೆ. ಕೆಲವರು ನಾಯಕತ್ವ ಬದಲಾವಣೆ ಮಾಡಲು ಗಂಭೀರ ಪ್ರಯತ್ನ ನಡೆಸಿದ್ದರು. ಆದರೆ ಹೈಕಮಾಂಡ್ ಅವರ ಬೇಡಿಕೆಗೆ ಮನ್ನಣೆ ನೀಡಿಲ್ಲ. ಸದ್ಯಕ್ಕೆ ಪಕ್ಷದಲ್ಲಿ ಅಂತಹ ಚರ್ಚೆಗಳು ನಡೆಯುತ್ತಿಲ್ಲ, ಮಾಧ್ಯಮಗಳಲ್ಲಿ ಮಾತ್ರ ಸದ್ದು ಮಾಡುತ್ತಿದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಡಾ ಹಗರಣದಲ್ಲಿ ಸಿಎಂ ಕುಟುಂಬಕ್ಕೆ ನ್ಯಾಯಾಲಯದಿಂದ ಕ್ಲೀನ್ ಚೀಟ್ ಸಿಕ್ಕಿರುವ ಬಗ್ಗೆ ಪ್ರತಿಕ್ರಿಯಿಸಿದ ಯತೀಂದ್ರ, ದೂರುದಾರರು ಮೇಲ್ಮನವಿ ಹೋಗುತ್ತೇವೆ ಎಂದು ಹೇಳಿದ್ದಾರೆ. ಆ ಪ್ರಕ್ರಿಯೆ ನಡೆಯಲಿ. ನಂತರ ಸೈಟ್ ವಾಪಸ್ ಪಡೆಯುವ ಬಗ್ಗೆ ನಮ್ಮ ತಾಯಿ ತೀರ್ಮಾನ ಮಾಡುತ್ತಾರೆ. ಇನ್ನೂ ಕಾನೂನು ಪ್ರಕ್ರಿಯೆಗಳು ಬಾಕಿ ಇದೆ. ಮೊದಲು ಅವೆಲ್ಲಾ ಮುಗಿಯಲಿ ಎಂದರು.

ನಾನು ಯಾವತ್ತೂ ಸಚಿವ ಜಾರ್ಜ್ ಅವರ ಬಗ್ಗೆ, ಅವರ ಇಲಾಖೆಯ ಬಗ್ಗೆ ಯಾವ ಚರ್ಚೆಯೂ ಮಾಡಿಲ್ಲ. ಬಿಜೆಪಿಯವರು ನನ್ನ ಹೆಸರನ್ನು ಎಳೆದು ತಂದಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇವಿಎಂ ಹ್ಯಾಕಿಂಗ್ ಸಾಧ್ಯತೆಯ ಬಗ್ಗೆ ಮಾತನಾಡಿದ ಯತೀಂದ್ರ, ಎಲ್ಲಾ ಚುನಾವಣೆಗಳಲ್ಲೂ ಇವಿಎಂ ರದ್ದಾಗಬೇಕು. ಬ್ಯಾಲೇಟ್ ಪೇಪರ್ ಬಳಕೆ ಮತ್ತೆ ಬರಬೇಕು. ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಲಾ ಗಿದೆ. ಎಲ್ಲಾ ವಿಧಾನಸಭೆ ಚುನಾವಣೆಗಳಲ್ಲೂ ಬ್ಯಾಲೆಟ್ ಪೇಪರ್ ಬಳಕೆಯಾಗಬೇಕು. ಇವಿಎಂ ಮತಯಂತ್ರದಲ್ಲಿ ಸಾಕಷ್ಟು ದೋಷಗಳಿವೆ. ಅದನ್ನು ಹ್ಯಾಕ್ ಮಾಡಬಹುದು. ಈಗ ಬ್ಯಾಲೆಟ್ ಬಾಕ್ಸ್ ಕಳ್ಳತನ ಮಾಡಲು ಆಗಲ್ಲ. ತಾಂತ್ರಿಕ ಕಳ್ಳತನ ಮಾಡಲು ಇವಿಎಂನಲ್ಲಿ ಸಾಧ್ಯವಿದೆ. ಈ ಕಾರಣಕ್ಕೆ ಇವಿಎಂ ರದ್ದಾಗಬೇಕು ಎಂದು ಆಗ್ರಹಿಸಿದರು.

Related Posts

Leave a Reply

Your email address will not be published. Required fields are marked *