ಬೆಳಗಾವಿಯಲ್ಲಿ ಮಹಿಳಾ ಅಧಿಕಾರಿಯ ಖಾಸಗಿ ಕ್ಷಣಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆಹಿಡಿದು 50 ಲಕ್ಷ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಪ್ರಕರಣ ಸದ್ಯ ಬೆಳಗಾವಿಯಲ್ಲಿ ಸಂಚಲನ ಮೂಡಿಸಿದೆ. ಗೋಕಾಕ್‌ನ ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ಬುಲ್ ರಶೀದ್ ಮಕಾಂದಾರ್ ಹಾಗೂ ಮೊಹಮ್ಮದ್ ಬಾಳೇಕುಂದ್ರಿ ಬಂಧಿತ ಆರೋಪಿಗಳು.
ಬೆಳಗಾವಿಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿ ಮಹಿಳಾ ಅಧಿಕಾರಿಯ ಬೆಡ್‌ರೂಂನ ಖಾಸಗಿ ದೃಶ್ಯಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳಾ ಅಧಿಕಾರಿಯು ಬ್ಲ್ಯಾಕ್‌ಮೇಲ್ ಬಗ್ಗೆ ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಎರಡು ಸ್ಯಾಮ್‌ಸಂಗ್ ಅಲ್ಟ್ರಾ ಮೊಬೈಲ್, ಒಂದು ವಿವೋ ಮೊಬೈಲ್, 64 ಜಿಬಿ ಪೆನ್‌ಡ್ರೈವ್, ಆರು ರಹಸ್ಯ ಕ್ಯಾಮರಾಗಳು, ಎರಡು ಒಟಿಜಿ ಸಾಧನಗಳು, ಹಲವು ಮೆಮೊರಿ ಕಾರ್ಡ್‌ಗಳು ಹಾಗೂ ಇನ್ನೋವಾ ಕ್ರಿಸ್ಟಾ ಕಾರನ್ನು ಜಪ್ತಿ ಮಾಡಿದ್ದಾರೆ.
ಮಹಿಳಾ ಅಧಿಕಾರಿಯ ಮನೆ ಕೆಲಸದಾತ ಮನೆಯ ಕೀಯನ್ನು ಕಿಟಕಿಯಲ್ಲಿ ಇಟ್ಟು ಹೋಗಿರುವುದುನ್ನು ಆರೋಪಿಗಳಿಗೆ ತಿಳಿಸಿದ್ದ. ಆರೋಪಿಗಳು ಮನೆಗೆ ನುಗ್ಗಿ ಬೆಡ್‌ರೂಮ್ ಹಾಗೂ ಹಾಲ್‌ನಲ್ಲಿ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿ ಅಧಿಕಾರಿಯ ಖಾಸಗಿ ದೃಶ್ಯಗಳನ್ನು ಸೆರೆಹಿಡಿದು ತೆಗೆದುಕೊಂಡು ಹೋಗಿದ್ದರು. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವುದಾಗಿ ಬೆದರಿಸಿ ಹಣ ಕೇಳುತ್ತಿದ್ದರು. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು, ಪರಾರಿಯಾಗಿರುವ ಮನೆ ಕೆಲಸದವನ ಪತ್ತೆಗಾಗಿ ಬಲೆ ಬೀಸಿದ್ದಾರೆ.


