Menu

ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ: ಡಿಕೆ ಶಿವಕುಮಾರ್‌

ಮೆಟ್ರೋ ದರ ಏರಿಕೆ ವಿಚಾರ ರಾಜ್ಯ ಸರ್ಕಾರದವರೆಗೆ ಬರುವುದಿಲ್ಲ. ಕೇಂದ್ರದ ಸಚಿವಾಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿ ಇದ್ದರೂ ತೀರ್ಮಾನ ಮಾಡುವುದು ಅವರೇ ಎಂದು  ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ ಎಂದಾಗ ಹೀಗೆ ಪ್ರತಿಕ್ರಿಯಿಸಿದ್ದಾರೆ. ನನ್ನ ಬಳಿಗೆ ಇನ್ನು ಯಾವುದೇ ಫೈಲ್ ಬಂದಿಲ್ಲ. ಕೇಂದ್ರ ಸರ್ಕಾರದ ಕಾರ್ಯದರ್ಶಿ, ಬಿಎಂಆರ್ ಸಿಎಲ್ ಮುಖ್ಯಸ್ಥರ  ಸಮಿತಿ ಇದೆ. ಅವರು ಬೆಲೆ ಏರಿಕೆ ತೀರ್ಮಾನ ಮಾಡಿದ್ದು, ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ನಾನು ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ ಎಂದರು.

ಈ ವಿಚಾರದಲ್ಲಿ ಬಿಜೆಪಿಯವರು  ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರು ತಮ್ಮದೇ ಕೇಂದ್ರ ಸಚಿವರಿಗೆ ಈ ವಿಚಾರ ಹೇಳಬೇಕು. ಅವರು ಹೇಳಲು ಸಾಧ್ಯವೇ?” ಎಂದರು. ಮೆಟ್ರೋ ದರ ಏರಿಕೆ ರಾಜ್ಯ ಸರ್ಕಾರ ಮಾಡುವುದೋ, ಕೇಂದ್ರ ಸರ್ಕಾರ ಮಾಡುವುದೋ ಎಂದು ಸ್ಪಷ್ಟತೆ ಸಿಕ್ಕಿಲ್ಲ ಎಂದು ಕೇಳಿದಾಗ, “ಈ ವಿಚಾರ ರಾಜ್ಯ ಸರ್ಕಾರದವರೆಗೆ ಬರುವುದಿಲ್ಲ. ಕೇಂದ್ರದ ಸಚಿವಲಯದ ಕಾರ್ಯದರ್ಶಿ ಈ ಸಮಿತಿಯ ಮುಖ್ಯಸ್ಥರು. ರಾಜ್ಯದಿಂದ ನಾಲ್ಕು ಜನ ಪ್ರತಿನಿಧಿ ಇದ್ದರೂ ತೀರ್ಮಾನ ಮಾಡುವುದು ಅವರೇ” ಎಂದು ತಿಳಿಸಿದರು.

ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಸಮಿತಿ ಸದಸ್ಯರನ್ನು ಬದಲಿಸಿ ದರ ನಿಯಂತ್ರಣ ಮಾಡಬಹುದು ಎಂಬ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಹೇಗೆ ಬದಲಾವಣೆ ಮಾಡಲು ಸಾಧ್ಯ. ಅವರು ಕರ್ನಾಟಕದವರನ್ನೇ ಈ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಅನುಮತಿ ಕೊಡಿಸಲಿ. ಕೇಂದ್ರ ಸರ್ಕಾರ ಮೆಟ್ರೋ ಯೋಜನೆಗೆ ನೀಡುವುದು  12-13% ಮಾತ್ರ. ಕೇಂದ್ರದವರು ಅಧ್ಯಕ್ಷರಾಗಿರುತ್ತಾರೆ ಎಂದು ಈ ಹಿಂದೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅವರು ನಮಗೆ ಅನುಮತಿ ಕೊಡಿಸಲಿ” ಎಂದರು.

ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲವೇ ಎಂದು ಕೇಳಿದಾಗ, “ಈ ವಿಚಾರ ನಮಗೆ ಸಂಬಂಧವಿಲ್ಲ. ಈ ಬಗ್ಗೆ ಅವರು ನಮ್ಮ ಜೊತೆ ಚರ್ಚೆ ಮಾಡಿಲ್ಲ. ಹೀಗಾಗಿ ನಾನು ಸಚಿವ ಸಂಪುಟದಲ್ಲಿ ಹಾಗೂ ಸಿಎಂ ಜೊತೆ ಈ ಬಗ್ಗೆ ಚರ್ಚೆ ಕೂಡ ಮಾಡಲು ಆಗಿಲ್ಲ” ಎಂದರು.  ಬೇರೆ ನಗರಗಳಿಗೆ ಹೋಲಿಕೆ ಮಾಡಿದರೆ ನಮ್ಮ ಮೆಟ್ರೋ ದರ ದುಬಾರಿ ಆಗಿಲ್ಲವೇ ಎಂದು ಕೇಳಿದಾಗ, “ನಾನು ಬೇರೆ ನಗರಗಳ ದರದ ಜೊತೆ ಹೋಲಿಕೆ ಮಾಡಿ ನೋಡುತ್ತೇನೆ” ಎಂದು ತಿಳಿಸಿದರು. ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಪ್ರಸ್ತಾಪ ಇದೆಯೇ ಎಂದು ಕೇಳಿದಾಗ, “ಸಧ್ಯಕ್ಕೆ ಆ ವಿಚಾರ ಚರ್ಚೆ ಇಲ್ಲ” ಎಂದು  ಉತ್ತರಿಸಿದರು.

ಜಿಬಿಎ ಚುನಾವಣೆ ವಾರ್ಡ್ ಮೀಸಲಾತಿ ಬಗ್ಗೆ ಕೇಳಿದಾಗ, “ಈ ಪ್ರಕ್ರಿಯೆಯನ್ನು ಅದಕ್ಕೆ ಆದ ಸಮಿತಿ ಮಾಡಲಿದೆ. ಆ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ” ಎಂದರು. ಹೈಕಮಾಂಡ್ ನಾಯಕರು ಆದಷ್ಟು ಬೇಗ ಅಧಿಕಾರ ಹಂಚಿಕೆ ಇತ್ಯರ್ಥ ಮಾಡಬೇಕು ಎಂಬ ಶಾಸಕರು ಹಾಗೂ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಇಂದು ರಾಜಕೀಯ ಚರ್ಚೆ ಮಾಡುವುದು ಬೇಡ” ಎಂದು ಪ್ರತಿಕ್ರಿಯಿಸಿದರು.

ಕೆಲವು ಶಾಸಕರನ್ನು ವಿದೇಶಕ್ಕೆ, ಗೋವಾಕ್ಕೆ ಕಳುಹಿಸಲಾಗುತ್ತಿದೆಯೇ ಎಂದು ಕೇಳಿದಾಗ, “ನನಗೆ ಈ ವಿಚಾರ ಗೊತ್ತಿಲ್ಲ. ನಾನು ಈ ವಿಚಾರದಲ್ಲಿ ಭಾಗಿಯಾಗಿಲ್ಲ. ನನ್ನ ಬಳಿ ಯಾರೂ ಈ ವಿಚಾರ ಚರ್ಚೆ ಮಾಡಿಲ್ಲ” ಎಂದರು. ದೆಹಲಿಗೆ ಹೋಗುತ್ತೀರಾ ಎಂದು ಕೇಳಿದಾಗ, “ನಾಳೆ ಮಂಗಳೂರಿಗೆ ಹೋಗುತ್ತಿದ್ದೇನೆ, ನಾಡಿದ್ದು ರಾಯಚೂರು, ನಂತರ ಗದಗಕ್ಕೆ ಹೋಗುತ್ತಿದ್ದೇನೆ. ದೆಹಲಿಗೆ ಹೋಗುವಾಗ ನಮ್ಮ ಕಾರ್ಯದರ್ಶಿಗಳು ಪ್ರವಾಸ ಪಟ್ಟಿ ಬಿಡುಗಡೆ ಮಾಡುತ್ತಾರೆ” ಎಂದು ಹೇಳಿದರು.

ಸೂಕ್ತ ಸಮಯದಲ್ಲಿ ಕರೆಸಿ ಮಾತನಾಡಲಾಗುವುದು ಎಂಬ ಹೈಕಮಾಂಡ್ ನಾಯಕರು ಹೇಳಿದ್ದರು, ನೀವು ದೆಹಲಿ ಹೋಗುವ ನಿರೀಕ್ಷೆ ಇದೆಯೇ ಎಂದು ಕೇಳಿದಾಗ, “ನಾನು ದೆಹಲಿಗೆ ಹೋದರೆ, ನಿಮಗೆ ತಿಳಿಸಿಯೇ ಹೋಗುತ್ತೇನೆ” ಎಂದು ತಿಳಿಸಿ ದರು. ನೀವು ಉತ್ತಮವಾಗಿ ವಾಲಿಬಾಲ್ ಆಡುತ್ತೀರಿ ಎಂದಾಗ, “ನಾನು ಶಾಲೆಯಲ್ಲಿದ್ದಾಗ ವಾಲಿಬಾಲ್ ಆಡುತ್ತಿದ್ದೆ, ಕ್ರಾಸ್ ಕಂಟ್ರಿ ಓಡುತ್ತಿದ್ದೆ, ಜಾವೆಲಿನ್ ಎಸೆತ, ಕಬ್ಬಡ್ಡಿ ಆಡುತ್ತಿದ್ದೆ” ಎಂದರು.

ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಕೇಳಿದಾಗ, “ಈಗಾಗಲೇ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ. ನಾನು ಯಾವೆಲ್ಲ ಯೋಜನೆ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆನೋ, ಎಲ್ಲವನ್ನು ಮುಂದಿನ ಎರಡೂವರೆ ವರ್ಷದಲ್ಲಿ ಅಂತಿಮ ಹಂತಕ್ಕೆ ತರಲಾಗುವುದು. ನಾನು ಸುಮ್ಮನೆ ಯಾವುದೇ ಆಶ್ವಾಸನೆ ನೀಡಿಲ್ಲ ಎಂದು ಉತ್ತರಿಸಿದರು. ಸಚಿವ ಸಂಪುಟ ಪುನಾರಚನೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಸಿಎಂ ಬಳಿ ಮಾತನಾಡಿ” ಎಂದರು.

Related Posts

Leave a Reply

Your email address will not be published. Required fields are marked *