ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ಪ್ರಭೇದದ ಪಕ್ಷಿಗಳಿವೆ ಎಂಬುದನ್ನು ಅರಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ಮುಂದಾಗಿ, ಫೆ.1 ಮತ್ತು 2ರಂದು ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಸಮೀಕ್ಷೆ ನಡೆಯಲಿದೆ.
ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಿರುವ ಈ ವನ್ಯಜೀವಿಧಾಮ 906 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯ ಪ್ರದೇಶ ಹೊಂದಿದೆ. ಪಕ್ಷಿಗಳ ಸಮೀಕ್ಷೆಗಾಗಿ ಸಾರ್ವಜನಿಕರು, ವನ್ಯಜೀವಿ ಪ್ರಿಯರು, ಸ್ವಯಂ ಸೇವಕರನ್ನೂ ಬಳಸಿಕೊಳ್ಳಲಾಗುತ್ತಿದೆ. ಈಗಾಗಲೇ ನೋಂದಣಿಯನ್ನೂ ಮಾಡಿಸಿಕೊಳ್ಳಲಾಗಿದೆ. 2 ದಿನ ನಡೆಯುವ ಸಮೀಕ್ಷೆಗಾಗಿ 50 ತಂಡಗಳನ್ನು ರಚಿಸಲಾಗುತ್ತಿದೆ. ಪ್ರತಿ ತಂಡದಲ್ಲೂ ಸ್ವಯಂ ಸೇವಕರು ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಅಧಿಕಾರಿ ಸೇರಿದಂತೆ 5-6 ಜನರ ತಂಡ ರಚಿಸಿ ಸಮೀಕ್ಷೆ ಮಾಡಲಾಗುತ್ತದೆ. ಈ ತಂಡಗಳು 2 ದಿನವೂ ಬೆಳಗಿನ ಜಾವ 3ರಿಂದ 4 ಗಂಟೆಯವರೆಗೆ ಹಾಗೂ ಸಂಜೆ ವೇಳೆ ಕಾಡಿನಲ್ಲಿ ಸಂಚರಿಸಿ ಪಕ್ಷಿಗಳ ಇರುವಿಕೆಯನ್ನು ದಾಖಲಿಸಲಿವೆ.
ಪ್ರತಿ ತಂಡಕ್ಕೂ ನಿಗದಿತ ಸ್ಥಳವನ್ನು ನೀಡಿ ಅಲ್ಲಿ ಬರುವ ಪಕ್ಷಿಗಳ ಪ್ರಭೇದವನ್ನು ದಾಖಲಿಸಲಾಗುತ್ತದೆ. ಅವುಗಳು ಹಾರಾಡುವುದು, ಕುಳಿತಿರುವುದು ಸೇರಿದಂತೆ ಮತ್ತಿತರ ಭಾವಚಿತ್ರವನ್ನು ತೆಗೆದು ಅರಣ್ಯ ಇಲಾಖೆಯಿಂದ ನೀಡಲಾಗುವ ಮಾದರಿ ಅರ್ಜಿಯಲ್ಲಿ ದಾಖಲಿಸಲಾಗುವುದು. ಎಲ್ಲ 50 ತಂಡಗಳಿಂದಲೂ ಪಡೆಯುವ ವರದಿಗಳನ್ನು ಸೇರಿಸಿ, ಅರಣ್ಯ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪಕ್ಷಿ ತಜ್ಞರು ಪರಿಶೀಲಿಸಿ ವನ್ಯಜೀವಿಧಾಮದ ಅರಣ್ಯದಲ್ಲಿ ಎಷ್ಟು ಪ್ರಭೇದದ ಪಕ್ಷಿಗಳಿವೆ ಎಂಬ ವರದಿ ಸಿದ್ಧಪಡಿಸಲಾಗುತ್ತದೆ.