Menu

ಖಜಾನೆ ತುಂಬಿಸಲು ಸರ್ಕಾರದಿಂದ 569 ಮದ್ಯ ಲೈಸೆನ್ಸ್‌ ಇ- ಹರಾಜು

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಿಳಾ ಆಯೋಗ ಇತ್ತೀಚೆಗೆ ಮನವಿ ಮಾಡಿದೆ, ಇದೀಗ ಸರ್ಕಾರ ರಾಜ್ಯದ 569 ವೈನ್‌ ಸ್ಟೋರ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಲೈಸೆನ್ಸ್‌ ಇ-ಹರಾಜಿಗೆ ಮುಂದಾಗಿದೆ.

ಮದ್ಯ ಮಾರಾಟ ಇಳಿಕೆಯಾಗಿದ್ದು, ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾದ ಅಬಕಾರಿ ಇಲಾಖೆ, ರಾಜ್ಯದ 569 ವೈನ್‌ ಸ್ಟೋರ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳ ಲೈಸೆನ್ಸ್‌ ಹರಾಜಿಗೆ ಕ್ರಮ ಕೈಗೊಂಡಿದೆ. 477 ವೈನ್‌ ಶಾಪ್‌ ಹಾಗೂ 92 ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಲೈಸೆನ್ಸ್‌ಗಳನ್ನು ಇ-ಹರಾಜು ಮಾಡಲು ಅಬಕಾರಿ ಇಲಾಖೆ ಅಧಿಸೂಚನೆ ಹೊರಡಿಸಿದೆ.

ಈ ಹರಾಜಿನಿಂದ ಸಾವಿರ ಕೋಟಿ ರುಪಾಯಿಗೂ ಅಧಿಕ ಆದಾಯವನ್ನು ಅಬಕಾರಿ ಇಲಾಖೆ ನಿರೀಕ್ಷಿಸಿದೆ. ಇ-ಹರಾಜಿಗೆ ಮದ್ಯ ಮಾರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾದರೂ ಇಲಾಖೆ ಹರಾಜಿಗೆ ಸಿದ್ಧತೆ ನಡೆಸಿದೆ. ಹರಾಜಿನಲ್ಲಿ ಪರಿಶಿಷ್ಟ ಜಾತಿಯ ‘ಎ’ ಮತ್ತು ‘ಬಿ’ ವರ್ಗಕ್ಕೆ ತಲಾ ಶೇ.6, ‘ಸಿ’ ವರ್ಗಕ್ಕೆ ಶೇ.5 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.7ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಡಿ.22ರಿಂದ ಬಿಡ್‌ ನೋಂದಣಿ ಆರಂಭವಾಗಲಿದೆ. ಜ.13 ರಿಂದ 20 ರವರೆಗೂ ನೇರ ಹರಾಜು ನಡೆಯಲಿದೆ. ಇ-ಹರಾಜು ಮತ್ತು ಬಿಡ್ಡಿಂಗ್‌ಗಾಗಿ ನೋಂದಾಯಿಸಿಕೊಳ್ಳುವ ವಿಧಾನ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಇತ್ತೀಚೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದು, ‘ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ಮದ್ಯದಂಗಡಿಗಳು ಹೆಚ್ಚುತ್ತಿವೆ. ಇದರಿಂದ ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.

Related Posts

Leave a Reply

Your email address will not be published. Required fields are marked *