ಬೈರತ್: ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಸಿರಿಯಾದ ಬಂಡಾಯ ಗುಂಪು ಹೇಳಿಕೊಂಡಿದೆ. ಬಂಡುಕೋರರು ಡಮಾಸ್ಕಸ್ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ದೇಶ ತೊರೆದು ಬೇರೆಡೆಗೆ ಪಲಾಯನ ಮಾಡಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಈ ಕುರಿತು ‘ಅಸೋಸಿಯೇಟ್ ಪ್ರೆಸ್’ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್ ರೆಹಮಾನ್, ‘ಅಸ್ಸಾದ್ ಅವರು ಇಂದು ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ’ ಎಂದು ಹೇಳಿದರು.
ಅಸ್ಸಾದ್ ದೇಶದಿಂದ ಪಲಾಯನಗೈದಿದ್ದಾರೆ ಎಂಬ ವದಂತಿಯನ್ನು ಸರ್ಕಾರ ನಿರಾಕರಿಸಿದೆ. ಏತನ್ಮಧ್ಯೆ, ಜನರು ಆಯ್ಕೆ ಮಾಡುವ ನಾಯಕತ್ವಕ್ಕೆ ಬೆಂಬಲ ನೀಡುವುದಾಗಿ ಸಿರಿಯಾ ಪ್ರಧಾನಿ ಮೊಹಮ್ಮದ್ ಘಾಜಿ ಅಲ್-ಜಲಾಲಿ ಹೇಳಿದ್ದಾರೆ.
ಆದರೆ ಅಸ್ಸಾದ್ ರಷ್ಯಾ ಅಥವಾ ಟೆಹರಾನ್ಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಇನ್ನೂ ಒಂದು ಮಾಹಿತಿಯ ಪ್ರಕಾರ ಅಸ್ಸಾದ್ ಇದ್ದ ವಿಮಾನ ಹಮಾ ನಗರದ ಸಮೀಪ ನಾಂತ್ತೆಯಾಗಿದ್ದು ಅವರು ಮೃತಪಟ್ಟಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.
ಬಶರ್ ಅಲ್-ಅಸ್ಸಾದ್ ರಷ್ಯಾದ ಸರಕು ವಿಮಾನದಲ್ಲಿ ಸಿರಿಯಾವನ್ನು ತೊರೆದಿದ್ದಾರೆ ಮತ್ತು ಅಸ್ಸಾದ್ ಅವರ ವಿಮಾನವು ರಾಡಾರ್‌ನಿಂದ ಕಾಣೆಯಾಗಿದೆ.
ಸಿರಿಯಾದ ಪ್ರಧಾನಿ ಮೊಹಮ್ಮದ್ ಗಾಜಿ ಜಲಾಲಿ ಅವರು ತಮ್ಮ ಮನೆಯಿಂದಲೇ ವೀಡಿಯೊ ಹೇಳಿಕೆಯನ್ನು ಬಿಡುಗಡೆ ಮಾಡಿದರು ಮತ್ತು ಅವರು ದೇಶದಲ್ಲಿಯೇ ಉಳಿದು ಅಧಿಕಾರದ ಸುಗಮ ಹಸ್ತಾಂತರಕ್ಕೆ ಶ್ರಮಿಸುವುದಾಗಿ ಹೇಳಿದ್ದಾರೆ. ಬಂಡುಕೋರರ ಗುಂಪು ಸಿರಿಯಾದಲ್ಲಿ ಆಕ್ರಮಣವನ್ನು ಘೋಷಿಸಿದೆ.
ಸೇನೆ ಹಾಗೂ ಭದ್ರತಾ ಪಡೆಗಳು ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ನಡೆದಿವೆ. ಇದರಿಂದ ಸಿರಿಯಾ ವಿಮಾನ ನಿಲ್ದಾಣದ ಸ್ಥಿತಿ ಅತಂತ್ರವಾಗಿದ್ದು, ಅಂತಾರಾಷ್ಟ್ರೀಯ ಸಂಚಾರ ಅಪಾಯಕ್ಕೆ ಸಿಲುಕಿದೆ ಎಂದು ವರದಿಯಾಗಿದೆ.
ಡಮಾಸ್ಕಸ್ ಬಂಡು ವಶ
ಅಸ್ಸಾದ್ ಸಹೋದರ ಮಹೇರ್ ಅಲ್-ಅಸ್ಸಾದ್ ಕೂಡ ಪರಾರಿಯಾಗಿದ್ದಾರೆ. ಬಂಡುಕೋರರು ಎಲ್ಲಾ ಕಡೆಯಿಂದ ರಾಜಧಾನಿ ಡಮಾಸ್ಕಸ್ ಪ್ರವೇಶಿಸಿದ್ದಾರೆ.
ಬಂಡುಕೋರರು ಡಮಾಸ್ಕಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದ್ದಾರೆ. ಸೇನಾ ಪ್ರಧಾನ ಕಛೇರಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಂಡುಕೋರ ಗುಂಪುಗಳಿಗೆ ಅಮೆರಿಕ ಮತ್ತು ಇರಾನ್ ಬೆಂಬಲವಿದೆ.
ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಬಂಡುಕೋರ ಗುಂಪುಗಳು ಅಧಿಕೃತ ಹೇಳಿಕೆಯಲ್ಲಿ ತಿಳಿಸಿವೆ.
ನಾಗರಿಕರಲ್ಲಿ ಹೆಚ್ಚಿದ ಆತಂಕ
ಇದು ಸಿರಿಯಾ ನಾಗರಿಕರಲ್ಲಿ ಆತಂಕ ಮೂಡಿಸಿದ್ದು, ಪರಿಸ್ಥಿತಿ ಪರಿಣಾಮದಿಂದ ಪ್ರಮುಖ ಬೀದಿಗಳಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಜನರು ಎಟಿಎಂಗಳಿಂದ ಹಣ ಡ್ರಾ ಮಾಡಿಕೊಳ್ಳಲು ಸರದಿ ಸಾಲುಗಳಲ್ಲಿ ಕಾದು ನಿಲ್ಲುತ್ತಿದ್ದಾರೆ.
ಡಮಾಸ್ಕಸ್ ಉಪನಗರದಲ್ಲಿ ಅಸ್ಸಾದ್ ತಂದೆ, ಹಫೇಜ್ ಅಲ್ ಅಸ್ಸದ್ ಅವರ ಪ್ರತಿಮೆಯನ್ನು ಪ್ರತಿಭಟನಾಕಾರರು ಉರುಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಂಡುಕೋರರು ಪಾರಮ್ಯ ಮರೆಯುತ್ತಿದ್ದಂತೆ ನೂರಾರು ಸಿರಿಯಾ ಸೈನಿಕರು ಇರಾನ್ ಕಡೆ ಪಲಾಯನ ಮಾಡುತ್ತಿದ್ದು, ಅವರಿಗೆ ಗಡಿಗಳನ್ನು ಮುಕ್ತಗೊಳಿಸಲಾಗಿದೆ.
ಅಧಿಕಾರಿಗಳು ಸೇರಿದಂತೆ ಸುಮಾರು ೨ ಸಾವಿರ ಸೈನಿಕರು ಇರಾನ್ ಕಡೆ ದೌಡಾಯಿಸಿದ್ದಾರೆ ಎನ್ನಲಾಗಿದೆ.