Menu

ಜುಲೈ15ರವರೆಗೆ ಮೂರು ವಿದೇಶಿ ಮಾರ್ಗಗಳಲ್ಲಿ ಏರ್‌ ಇಂಡಿಯಾ ಹಾರಾಟ ಸ್ಥಗಿತ

ಜೂನ್ 21ರಿಂದ ಜುಲೈ 15ರವರೆಗೆ ಮೂರು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ವಿಮಾನ ಸೇವೆ ಸ್ಥಗಿತಗೊಳಿಸಲಾಗುತ್ತಿದೆ. ಇತರ 16 ಮಾರ್ಗಗಳಲ್ಲಿ ಸೇವೆಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಏರ್‌ ಇಂಡಿಯಾ ತಿಳಿಸಿದೆ.

ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ನಂತರ ಕಾರ್ಯಾಚರಣೆಯಲ್ಲಿನ ಅಡಚಣೆಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

ದೆಹಲಿ-ನೈರೋಬಿ, ಅಮೃತಸರ-ಲಂಡನ್ (ಗ್ಯಾಟ್ವಿಕ್), ಗೋವಾ (ಮೋಪಾ)-ಲಂಡನ್ (ಗ್ಯಾಟ್ವಿಕ್) ನಡುವಿನ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯಾ ಮತ್ತು ಇತರ ಮಾರ್ಗಗಳಲ್ಲಿ 16 ಅಂತರರಾಷ್ಟ್ರೀಯ ವಿಮಾನಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಏರ್‌ ಇಂಡಿಯಾ ಮಾಹಿತಿ ನೀಡಿದೆ. ಉತ್ತರ ಅಮೆರಿಕದಲ್ಲಿ ದೆಹಲಿ-ಟೊರೊಂಟೊ, ದೆಹಲಿ-ವ್ಯಾಂಕೋವರ್, ದೆಹಲಿ-ಸ್ಯಾನ್ ಫ್ರಾನ್ಸಿಸ್ಕೊ, ದೆಹಲಿ-ಚಿಕಾಗೋ ಮತ್ತು ದೆಹಲಿ-ವಾಷಿಂಗ್ಟನ್ ಮಾರ್ಗಗಳ ನಡುವೆ ವಿಮಾನ ಸಂಚಾರ ಕಡಿಮೆಯಾಗಲಿದೆ.

ಎಲ್ಲಾ ವಿಮಾನಗಳ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗೆ ಸಮಯ ನೀಡುವುದು, ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ಹಾರಾಟದ ಅವಧಿ ಹೆಚ್ಚಾಗಿರುವ ಕಾರಣ ಈ ಕ್ರಮಕ್ಕೆ ಸಂಸ್ಥೆ ಮುಂದಾಗಿದೆ. ತೊಂದರೆಗೊಳಗಾದ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದೆ. ಪರ್ಯಾಯ ವಿಮಾನಗಳು, ಉಚಿತ ಮರು-ವೇಳಾಪಟ್ಟಿ ಮತ್ತು ಪೂರ್ಣ ಮರುಪಾವತಿಯಂತಹ ಆಯ್ಕೆಗಳನ್ನು ಒದಗಿಸುತ್ತಿದ್ದು, ಪ್ರಯಾಣಿಕರನ್ನು ನೇರವಾಗಿ ಸಂಪರ್ಕಿಸುತ್ತಿದೆ ಎಂದು ಏರ್‌ ಇಂಡಿಯಾ ಹೇಳಿದೆ. ಏರ್ ಇಂಡಿಯಾ ತನ್ನ ವೈಡ್-ಬಾಡಿ ವಿಮಾನಗಳ ಹಾರಾಟದಲ್ಲಿ ಶೇಕಡಾ 15 ಈಗಾಗಲೇ ಕಡಿತ ಘೋಷಿಸಿದೆ.

Related Posts

Leave a Reply

Your email address will not be published. Required fields are marked *