Menu

ಶಿಕ್ಷಣದ ಪರೀಕ್ಷಾ ಸುಧಾರಣೆ: ಭರವಸೆ ಮೂಡಿಸಿದ ನಿಲೇಕಣಿ ಸಾರಥ್ಯ

ಜಾಗತಿಕ ಮಟ್ಟದಲ್ಲಿ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಬಯಸಿರುವ ದೇಶದ ಇಂದಿನ ವಿದ್ಯಾರ್ಥಿ ಯಾವ ಗೊಂದಲ ಮತ್ತು ಗಲಿಬಲಿಗೂ ಸಿಲುಕದೆ ಯಶಸ್ವಿಪೂರ್ವಕ ಮಾರ್ಗದಲ್ಲಿ ಹೇಗೆ ನಡೆಯಬೇಕು? ಇದರ ಸಾಧನ, ಸಲಕರಣೆಗಳ ಬಗ್ಗೆ ನಂದನ್ ನಿಲೇಕಣಿ ಸಮಿತಿ ಸಮಗ್ರ ಅಧ್ಯಯನ ನಡೆಸಬೇಕಿದೆ.

ದೇಶದ ಉನ್ನತ ಶಿಕ್ಷಣದ ಪರೀಕ್ಷಾ ಸುಧಾರಣೆಗೆ ಸಂಬಂಧಿಸಿದಂತೆ ಸಂಪನ್ಮೂಲ ವ್ಯಕ್ತಿ ನಂದನ್ ನಿಲೇಕಣಿ ಸಾರಥ್ಯದಲ್ಲಿ ಕೇಂದ್ರ ಸರ್ಕಾರ ತಜ್ಞರನ್ನೊಳಗೊಂಡ ಅಧ್ಯಯನ ಸಮಿತಿಗೆ ಈಗ ಟೊಂಕ ಕಟ್ಟಿದೆ . ಈ ಸಂಬಂಧ ದೇಶದ ಪ್ರದಾನಿ ನರೇಂದ್ರ ಮೋದಿ ಭಾನುವಾರವಷ್ಟೆ ಹೇಳಿಕೆ ನೀಡಿರುವುದು ಗಮನಾರ್ಹ. ಇದೊಂದು ಸಕಾರಾತ್ಮಕ ಬೆಳವಣಿಗೆ.

ಸಂಸತ್ ಅಧಿವೇಶನ ಪ್ರಗತಿಯಲ್ಲಿರುವಾಗ ಪ್ರಧಾನಿ ಇಂತಹ ಮಹತ್ತರ ಹೇಳಿಕೆಯನ್ನು ಸಂಸತ್ ಹೊರಗೆ ಮಾಡುವುದಕ್ಕಿಂತಲೂ ಸದನದ ಒಳಗೇ ಮಾಡಿದಿದ್ದರೆ ಇದಕ್ಕೆ ಮತ್ತಷ್ಟು ಬಲ ಉಂಟಾಗುತ್ತಿತ್ತು. ಅದೇನೆ ಇರಲಿ. ಕಾಕ್ರೋಚ್ ಜನತಾ ಪಾರ್ಟಿಯ ಕ್ರಾಂತಿಕಾರಕ ನಡೆ ಮತ್ತು ಹೋರಾಟದ ಫಲವಾಗಿ ಈಗ ದೇಶದ ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೆಲವೊಂದು ಗಂಭೀರ ಸಂಗತಿಗಳಿಗೆ ಮತ್ತು ಕಾಡುವ ಸಮಸ್ಯೆಗಳ ಪರಿಹಾರಕ್ಕೆ ತರ್ಕಬದ್ಧ ಅಧ್ಯಯನಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

ಪ್ರಜಾತಂತ್ರದಲ್ಲಿ ತಪ್ಪು -ಒಪ್ಪುಗಳು ಮತ್ತು ಕಷ್ಟ, ನಷ್ಟಗಳು ಈ ಮೂಲಕವೇ ಬಗೆಹರಿಯಬೇಕಲ್ಲವೇ ? ಈ ದಿಶೆಯಲ್ಲಿ ಪರೀಕ್ಷಾ ಸುಧಾರಣೆಗೆ ಸಂಬಂಧಿಸಿದಂತೆ ನಿಲೇಕಣಿ ನೇತೃತ್ವದಲ್ಲಿ ಸಮಿತಿಯೊಂದು ರಚನೆಯಾಗುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಭರವಸೆ ಮೂಡಿಸಿದೆ. ದೇಶದ ಜನತೆಗೆ ಆಧಾರ್ ಗುರುತಿನ ನಂಬರ್ ಇರಬೇಕೆಂದು ಬಯಸಿದ ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ಸಮಿತಿಯ ಸಾರಥ್ಯವನ್ನೂ ನಿಲೇಖಣಿ ಅವರೇ ವಹಿಸಿದ್ದರೆಂಬುದು ಗಮನಾರ್ಹ.

ರಾಜ್ಯದವರೇ ಆದ ನಿಲೇಕಣಿ ಅವರೀಗ ಕರ್ನಾಟಕದಲ್ಲಿ ವೈದ್ಯ ಮತ್ತು ದಂತವೈದ್ಯ ಕೋರ್ಸ್ ಪ್ರವೇಶಕ್ಕೆ ಹಿಂದಿನ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಸಿಇಟಿ ವ್ಯವಸ್ಥೆಯ ಬಗ್ಗೆಯೂ ಪರಾಮರ್ಶೆ ಮಾಡುವುದು ಸೂಕ್ತ. ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿಗೆ ಈಗಲೂ ಭರವಸೆ ಆಗಿರುವ ಕರ್ನಾಟಕ ಸಿಇಟಿ ಮಾದರಿಯಲ್ಲಿ ನ್ಯಾಷನಲ್ ಲೆವೆಲ್‌ನಲ್ಲಿ ನೀಟ್ ನಡೆಯುವಂತಾದರೆ, ಪ್ರತಿಭಾವಂತ ಮತ್ತು ಸಾಮಾನ್ಯ ವರ್ಗದ ಮಕ್ಕಳ ವೈದ್ಯನಾಗಬೇಕೆನ್ನುವ ಮಹಾ ಕನಸು ಭಗ್ನವಾಗುವುದಿಲ್ಲ.

ನ್ಯಾಷನಲ್ ಲೆವೆಲ್‌ನಲ್ಲಿ ನಡೆಯುವ ಪರೀಕ್ಷೆ ಮತ್ತು ಅರ್ಥವಿಲ್ಲದ ಕೆಲವೊಂದು ಪಠ್ಯಕ್ರಮ ಇವೆಲ್ಲವೂ ಈಗ ನಿಲೇಕಣಿ ನೇತೃತ್ವದ ಸಮಿತಿ ಸಮಗ್ರ ಅಧ್ಯಯನ ನಡೆಸಬೇಕಿದೆ. ಏಕೆಂದರೆ ನೀಟ್ ಜೊತೆಗೆ ವಿದ್ಯಾರ್ಥಿಗಳ ಕತ್ತು ಹಿಸುಕುವಂತಹ ದೇಶದ ಕೆಲ ವಿವಿಗಳು ನಿರ್ವಹಿಸುತ್ತಿರುವ ಪರೀಕ್ಷಾ ವಿಧಾನಗಳಿಂದ ಬೇಸೆತ್ತು ಬಹಳಷ್ಟು ಮಂದಿ ವಿದ್ಯಾರ್ಥಿಗಳು ಅರ್ಧಕ್ಕೇ ತಮ್ಮ ವ್ಯಾಸಂಗವನ್ನು ಕೈಬಿಟ್ಟು ಕೈ ಚೆಲ್ಲುವಂತಾಗಿರುವುದು ಕಳವಳಕಾರಿ. ಪರೀಕ್ಷೆ ಮತ್ತು ಪ್ರವೇಶಪರೀಕ್ಷೆಗಳು ಇಂದಿನ ಪ್ರತಿಯೋರ್ವ ವಿದ್ಯಾರ್ಥಿಯ ಪಾಲಿಗೆ ಮಹತ್ವಪೂರ್ಣ ಎಂಬುದರಲ್ಲಿ ಎರಡು ಮಾತಿಲ್ಲ . ಒಟ್ಟಿನಲ್ಲಿ ನಿಲೇಕಣಿ ಸಮಿತಿ ಶೀಘ್ರ ವೇ ತನ್ನ ಕಾರ್ಯ ಚಟುವಟಿಕೆಯನ್ನು ಆರಂಭಿಸಿ ಸರ್ಕಾರಕ್ಕೆ ಉಪಯುಕ್ತಕರ ವರದಿಯನ್ನು ನೀಡಿದರೆ ಒಳಿತು.

Related Posts

Leave a Reply

Your email address will not be published. Required fields are marked *