ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಲ್ಲರ ಕಣ್ಣಲ್ಲಿ ರಿಯಲ್ ಎಸ್ಟೇಟ್ ಏಜೆಂಟ್, ಸರ್ಕಾರದಿಂದ ಯಾವುದೇ ಅಭಿವೃದ್ಧಿ ನಡೆದಿಲ್ಲ. ಆದರೂ ನೂರು ದಿನದ ಸಾಧನೆ ಎಂದು ಸಂಭ್ರಮಾಚರಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ಕಾಂಗ್ರೆಸ್ ಸರ್ಕಾರ ಗೊಂದಲದ ಗೂಡಾಗಿದ್ದು, ಅದನ್ನು ನಿವಾರಿಸಲು ಮುಖ್ಯಮಂತ್ರಿ ಡಿಕೆಶಿವಕುಮಾರ್ ದೇವಾಲಯಗಳಿಗೆ ಓಡಾಡುತ್ತಿದ್ದರು. ಹೆಸರಿಗೆ ನೂರು ದಿನವಾದರೂ ಜನರ ಅಭಿವೃದ್ಧಿಗೆ ಕೇವಲ ಮೂರು ದಿನ ಸಿಕ್ಕಿದೆ. ಅದರಲ್ಲೂ ಪ್ರಚಾರ, ಪತ್ರಿಕಾಗೋಷ್ಠಿ ಮಾಡಿದ್ದಾರೆ. ರೈತರಿಗೆ ಹಾಗೂ ಸಾಮಾನ್ಯ ಜನರಿಗೆ ಡಿ.ಕೆ.ಶಿವಕುಮಾರ್ ರಿಯಲ್ ಎಸ್ಟೇಟ್ ಏಜೆಂಟ್‌ನಂತೆ ಕಂಡಿದ್ದಾರೆ. ಲಾಲ್‌ಬಾಗ್ ನುಂಗು, ಸ್ಯಾಂಕಿ ಕೆರೆ ನುಂಗು, ಹೆಬ್ಬಾಳ ಕೆರೆ ನುಂಗು, ಬಿಡದಿಯ 9000 ಎಕರೆ ನುಂಗು, ಆನೇಕಲ್‌ನಲ್ಲಿ 3,000 ಎಕರೆ ನುಂಗು ಎಂಬುದನ್ನು ಬಿಟ್ಟರೆ ಮತ್ತೇನೂ ಮಾಡಿಲ್ಲ. ಬರಗಾಲ ಬಂದು ನಾಲ್ಕು ತಿಂಗಳಾದರೂ ಒಬ್ಬರಿಗೂ ಪರಿಹಾರ ನೀಡಿಲ್ಲ ಎಂದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ 2,500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ 12 ಜನರು ಸತ್ತಿದ್ದಾರೆ. ಒಂದು ಗುಂಡಿ ಮುಚ್ಚಲು 1 ಲಕ್ಷ ರೂ. ಖರ್ಚು ಮಾಡಿದ್ದು, ಅದರಲ್ಲಿ 75% ಕಾಂಗ್ರೆಸ್ ನಾಯಕರ ಜೇಬಿಗೆ ಸೇರಿದೆ. ಉದ್ಯಾನಗಳ 5% ಜಾಗವನ್ನು ರಿಯಲ್ ಎಸ್ಟೇಟ್‌ಗೆ ನೀಡಲು ಯೋಜಿಸಲಾಗಿತ್ತು. ಸರ್ಕಾರ ಉದ್ಯಮಿ ಗೌತಮ್ ಅದಾನಿಯನ್ನು ಕರೆಸಿ ಉದ್ಯಾನ ನೀಡಲು ಮುಂದಾಗಿತ್ತು. ನಂತರ ಜನರ ವಿರೋಧಕ್ಕೆ ಮಣಿದು ಯೂ-ಟರ್ನ್ ಮಾಡಲಾಯಿತು. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಎಲ್ಲ ಕೋರ್ಟ್‌ಗಳಲ್ಲೂ ನೀರು ಹರಿಸಿ ಎಂದೇ ಆದೇಶ ಬಂದಿದೆ. ಎಲ್ಲ ಪರೀಕ್ಷೆಯಲ್ಲೂ ಸಿಎಂ ಅನುತ್ತೀರ್ಣರಾಗಿದ್ದಾರೆ. ಆದರೂ ಅಭಿವೃದ್ಧಿಗೆ ಬದ್ಧ ಎಂದು ಜಾಹೀರಾತು ನೀಡಿದ್ದಾರೆ ಎಂದು ಹೇಳಿದರು.
ಜಿಲ್ಲಾಧಿಕಾರಿಗೆ ಮೀಸಲಾದ ಪಿಡಿ ಖಾತೆಯ ಹಣವನ್ನು ಬರಗಾಲಕ್ಕೆ ಬಳಸಲು ಸಾಧ್ಯವಿಲ್ಲ. ಅದರ ಬಗ್ಗೆ ಮೊದಲು ತಿಳಿದುಕೊಳ್ಳಬೇಕು. ಆ ಹಣ ಬಳಸುತ್ತಾರೆ ಎಂದರೆ ಸರ್ಕಾರ ಪಾಪರ್ ಆಗಿದೆ ಎಂದರ್ಥ. ಗೃಹಲಕ್ಷ್ಮಿಯ 5,000 ಕೋಟಿ ಇನ್ನೂ ಸಿಕ್ಕಿಲ್ಲ, ಅದು ಎಲ್ಲಿಗೆ ಹೋಗಿದೆ ಎಂದೂ ತಿಳಿದಿಲ್ಲ. ಮಹಿಳೆಯರ ಹಣ ಕದ್ದಿರುವುದನ್ನೇ ಸಾಧನೆ ಎನ್ನುತ್ತಿದ್ದಾರೆ. ಕೇವಲ ಘೋಷಣೆಗಳನ್ನೇ ಮಾಡುತ್ತಿದ್ದು, ಬ್ರ್ಯಾಂಡ್ ಬೆಂಗಳೂರು ಘೋಷಣೆ ಕಸದ ಬುಟ್ಟಿಯಲ್ಲಿದೆ. ಡಿ.ಕೆ.ಶಿವಕುಮಾರ್ ಘೋಷಿಸಿದ ಒಂದು ಯೋಜನೆ ಕೂಡ ಜಾರಿಯಾಗಿಲ್ಲ. ಸಾಕ್ಷಿಗುಡ್ಡೆ ಎಂದು ಹೇಳುತ್ತಿದ್ದರೂ ಎಲ್ಲ ಕಡೆ ಕಸದ ಗುಡ್ಡೆ ಬಂದಿದೆ. ಸಚಿವ ಕೃಷ್ಣ ಬೈರೇಗೌಡರು ರೀಲ್ಸ್ ಮಾಡುತ್ತಿದ್ದಾರೆ. ರಸ್ತೆ ಬದಿಯ ವಾಹನಗಳನ್ನು ವಿಲೇವಾರಿ ಮಾಡುತ್ತೇವೆಂದು ಅದನ್ನೂ ಮಾಡಿಲ್ಲ. ಕಸದಿಂದ ಸ್ವಾತಂತ್ರ್ಯ ಎಂದು ಹೇಳಿದರೂ ಎಲ್ಲೂ ಕಸ ಸ್ವಚ್ಛ ಆಗಿಲ್ಲ. ಸಿಎಂ ಡಿಕೆ ಶಿವಕುಮಾರ್ ಮನೆ ಮುಂದೆಯೇ ಕಸ ಬಿದ್ದಿದೆ. ಫ್ಲ್ಯಾಟ್ ಮಾಲೀಕರು ಕಸಕ್ಕೆ ಕಟ್ಟುತ್ತಿದ್ದ 40 ರೂ. ಅನ್ನು 400 ರೂ. ಗೆ ಏರಿಸಲಾಗಿದೆ ಎಂದರು.
ಜನರು ಛೀಮಾರಿ ಹಾಕುತ್ತಾರೆಂಬ ಕಾರಣಕ್ಕೆ ಬೆಂಗಳೂರು ಚುನಾವಣೆಯನ್ನು ಮುಂದೂಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಂದ ಕಿಸಾನ್ ಸಮ್ಮಾನ್ ಯೋಜನೆಯ 4,000 ರೂ. ಕಿತ್ತುಕೊಂಡರು. ರೈತ ವಿದ್ಯಾನಿಧಿ ಯೋಜನೆ ರದ್ದುಪಡಿಸಿದರು. ಹೀಗೆ ರೈತರಿಗೆ ದ್ರೋಹ ಬಗೆದು ವಿಶ್ವಾಸದ್ರೋಹ ಮಾಡಲಾಗಿದೆ. ಸಾಧನೆಯಲ್ಲಿ ಸೊನ್ನೆ, ಪ್ರಚಾರದಲ್ಲಿ ನಂ 1 ಎಂಬಂತಾಗಿದೆ. ಒಬ್ಬ ಸಚಿವರು ಈಗಾಗಲೇ ರಾಜೀನಾಮೆ ಕೊಟ್ಟಿರುವುದರಿಂದ ವಾಸ್ತವದಲ್ಲಿ ಇವರು ಸಂಭ್ರಮದ ಸಭೆ ಬದಲು ಸಂತಾಪ ಸೂಚಕ ಸಭೆ ಮಾಡಬೇಕಿತ್ತು. ಕೆಪಿಎಸ್ಸಿ ಹಗರಣ ಸಚಿವ ಪ್ರಿಯಾಂಕ್ ಖರ್ಗೆ ಬುಡಕ್ಕೆ ಬಂದಿದೆ. ಎಂಜಿನಿಯರ್ ನೇಮಕದಲ್ಲಿ ಹಗರಣ ನಡೆದಿದೆ ಎಂದು ಕೆಪಿಎಸ್ಸಿಯಿಂದಲೇ ಪತ್ರ ಬಂದಿದ್ದರೂ ನೇಮಕಾತಿ ಮಾಡಿ ಲೂಟಿ ಹೊಡೆಯಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ಜಾರಿ ಮಾಡಿದ್ದ ಯೋಜನೆಗೆ ಕಾಂಗ್ರೆಸ್ ಈಗ ಹೆಸರು ನೀಡುತ್ತಿದೆ. ನಮ್ಮ ಅವಧಿಯಲ್ಲಿ ಒಂದು ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿತ್ತು. ಅದನ್ನೇ ಭೂಮಿಯ ಹಕ್ಕು ಎಂದಿದ್ದಾರೆ. ರೈತರಿಗೆ ಉಳುಮೆ ಮಾಡಲು ಬಿಜೆಪಿ ಅವಧಿಯಲ್ಲಿ ಟ್ರಾಕ್ಟರ್ ನೀಡಲಾಗುತ್ತಿತ್ತು. ಈಗ ಅದಕ್ಕೆ ಹೊಸ ಹೆಸರು ನೀಡಲಾಗಿದೆ. ಸಕಾಲ ಸೇವೆಗೆ ಪ್ರಜಾಸೇವೆ ಎಂಬ ಹೆಸರು ನೀಡಿದ್ದು, ಅದಕ್ಕಾಗಿ ಇಲಾಖೆ ತೆರೆಯಲಾಗಿದೆ. ಅಲ್ಲಿ ಕಾಫಿ ಟೀ ಕೊಡಲು ಕೂಡ ಹಣವಿಲ್ಲ ಎಂದರು.
ಯಡಿಯೂರಪ್ಪನವರನ್ನು ಜೈಲಿಗೆ ಹಾಕಿದಾಗ ಯಾವ ಪಕ್ಷ ಅಧಿಕಾರದಲ್ಲಿತ್ತು? ಸತೀಶ್ ಜಾರಕಿಹೊಳಿ ಅವರು ಜಗ್ಗಲ್ಲ ಬಗ್ಗಲ್ಲ ಎಂದಿದ್ದಾರೆ. ಅಂಬೇಡ್ಕರ್ ಸಂವಿಧಾನದಲ್ಲಿ ಕಾನೂನಿಗೆ ಎಲ್ಲರೂ ಬಗ್ಗಲೇಬೇಕು. ಇದು ಸತೀಶ್ ಜಾರಕಿಹೊಳಿ ಅವರ ಇಲಾಖೆಯ ಮೇಲೆ ಆದ ದಾಳಿ ಅಲ್ಲ. ಇದನ್ನು ದಲಿತರ ಮೇಲಾದ ದಾಳಿ ಎಂದು ಬಿಂಬಿಸಬಾರದು. ಒಕ್ಕಲಿಗರು, ಕುರುಬರು ಮೊದಲಾದ ನಾಯಕರ ಮೇಲೆ ದಾಳಿಯಾದರೆ ಇಡೀ ಜಾತಿಗೆ ಆದ ಅಪಮಾನ ಎಂದರೆ, ಜಾರಿ ನಿರ್ದೇಶನಾಲಯದಿಂದ ಜಾತಿ ಇಲ್ಲದ ವ್ಯಕ್ತಿಯ ಮೇಲೆ ಮಾತ್ರ ದಾಳಿ ಮಾಡಬೇಕಾಗುತ್ತದೆ. ಡಿಕೆಶಿವಕುಮಾರ್ ಮೇಲೆ ದಾಳಿಯಾದರೆ ಇಡೀ ಒಕ್ಕಲಿಗರ ಮೇಲಾದ ದಾಳಿ ಎನ್ನಲಾಗುವುದಿಲ್ಲ. ನಾಗೇಂದ್ರ ಯಾವುದೇ ತಪ್ಪು ಮಾಡಿಲ್ಲವೆಂದರೆ 187 ಕೋಟಿ ರೂ. ಎಲ್ಲಿಗೆ ಹೋಯಿತು, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ತಿಳಿಸಿದರು.
ಬಿಜೆಪಿ ಅವಧಿಯಲ್ಲಿ ಎಷ್ಟು ಬರ ಪರಿಹಾರ ನೀಡಲಾಗಿದೆ ಎಂದು ನೋಡಲಿ. ಕೇವಲ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಬಾರದು. ಕೇಂದ್ರದಿಂದ ಬಂದ ಹಣವನ್ನು ಸರಿಯಾಗಿ ಬಳಸದೆ ಆ ಹಣ ಮರಳಿ ಹೋಗಿದೆ. ಮೇಕೆದಾಟು ಯೋಜನೆಯನ್ನೇ ಮಿತ್ರಪಕ್ಷದ ಬಳಿ ಮಾತಾಡಿಕೊಂಡು ಜಾರಿ ಮಾಡಿಲ್ಲ. ನಾವು ಕೆಪಿಎಸ್ ಸಿ ಹಗರಣವನ್ನು ಸಿಬಿಐಗೆ ನೀಡಿ ಎಂದು ಹಿಂದೆಯೇ ಆಗ್ರಹ ಮಾಡಿದ್ದೇವೆ. ಬಿಜೆಪಿ ಅವಧಿಯಲ್ಲಿ ಹಗರಣ ನಡೆದಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದರು.


