Menu

ದೇವೇಗೌಡರಿಗೆ ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ತಪ್ಪಿದ್ದೇಕೆ?

ದೇವೇಗೌಡರ ವಯೋಮಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡಲಿಲ್ಲ ಎಂದು ಈಗ ಹೇಳುವ ಹಾಗಿಲ್ಲ. ಈ ಮಾತುಗಳನ್ನು ದಿಲ್ಲಿ ವರಿಷ್ಠರು ಮೊದಲೇ ಯಾಕೆ ಸ್ಪಷ್ಟಪಡಿಸಲಿಲ್ಲ ಎಂಬ ಪ್ರಶ್ನೆ ತಲೆಯೆತ್ತುವುದು ಸಹಜ. ಇದರಿಂದ ಬಿಜೆಪಿಗೆ ಹಳೇ ಮೈಸೂರಿನಲ್ಲಿ ರಾಜಕೀಯವಾಗಿ ಸಂಭವಿಸುವ ಹಾನಿಯಂತೂ ಗಂಭೀರ.

ರಾಜ್ಯಸಭೆಗೆ ಮಾಜಿ ಪ್ರಧಾನಿ ದೇವೇಗೌಡ, ಮೈತ್ರಿಕೂಟದಿಂದ ಟಿಕೆಟ್ ನಿರೀಕ್ಷಿಸಿದ್ದು ನಿಜ. ಆದರೆ ಕೊನೆ ಗಳಿಗೆಯಲ್ಲಿ ದಿಲ್ಲಿ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ತಪ್ಪಿಸಿದ್ದು ಯಾಕೆ, ಮೇಲ್ನೋಟಕ್ಕೆ ಇದರ ಹಿಂದಿನ ರಾಜಕೀಯ ಒಳಸುಳಿ ಏನೇ ಇರಲಿ. ರಾಜ್ಯದ ರಾಜಕೀಯ ಮೊಗಸಾಲೆಯಲ್ಲಿ ಮಾತ್ರ ಇದೊಂದು ಬಹುಚರ್ಚಿತ ಸಂಗತಿ.

ಡಿ ಕೆ ಶಿವಕುಮಾರ್ ಒಂದು ವೇಳೆ ರಾಜ್ಯದ ಮುಖ್ಯಮಂತ್ರಿ ಆಗದೇ ಇದ್ದಿದ್ದರೆ ದೇವೇಗೌಡರಿಗೆ ಟಿಕೆಟ್ ಲಭಿಸುತ್ತಿತ್ತೇನೋ. ಎರಡು ವಾರಗಳ ಹಿಂದೆ ರಾಜ್ಯದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆಸಿದ್ದ ಕಮಲಾಧಿಪತಿಗಳು, ನಾಮಪತ್ರ ಸಲ್ಲಿಕೆಯ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿದ್ದು ಗಮನಾರ್ಹ. ಮಾಜಿ ಪ್ರಧಾನಿ ಎಂಬ ಗೌರವ ತೋರಿ ಈ ಹಿಂದೆ ಕಾಂಗ್ರೆಸ್ ಇವರನ್ನು ರಾಜ್ಯಸಭೆಗೆ ಆಯ್ಕೆಯಾಗಲು ನೆರವಾಗಿತ್ತು. ಆದರೆ ಈ ಸಾರಿ ಬಿಜೆಪಿ ದೇವೇಗೌಡರ ಊಹೆಗೂ ನಿಲುಕದ ರೀತಿಯಲ್ಲಿ ಟಿಕೆಟ್ ಕೈ ತಪ್ಪಿಸಿ ಪಕ್ಷದ ಕಾರ್ಯಕರ್ತರೊಬ್ಬರಿಗೆ ಮಣೆ ಹಾಕಿತು. ವಯೋಮಾನದ ಹಿನ್ನೆಲೆಯಲ್ಲಿ ದಿಲ್ಲಿ ಬಿಜೆಪಿ ದೇವೇಗೌಡರಿಗೆ ಟಿಕೆಟ್ ನೀಡಲಿಲ್ಲ ಎಂದು ಈಗ ಹೇಳುವ ಹಾಗಿಲ್ಲ . ಈ ಮಾತುಗಳನ್ನು ದಿಲ್ಲಿ ವರಿಷ್ಠರು ಮೊದಲೇ ಯಾಕೆ ಸ್ಪಷ್ಟಪಡಿಸಲಿಲ್ಲ ಎಂಬ ಪ್ರಶ್ನೆ ತಲೆಯೆತ್ತುವುದು ಸಹಜ. ಇದರಿಂದ ಬಿಜೆಪಿ ಹಳೇ ಮೈಸೂರಿನಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು.

ಮುಂದಿನ ಎರಡು ವರ್ಷಗಳಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದ್ದು ಇಂತಹ ಸಮಯದಲ್ಲಿ ಬಿಜೆಪಿ ತನ್ನ ಮೈತ್ರಿಗೆ ಶಾಕ್ ನೀಡಿರುವುದನ್ನು ಗಮನಿಸುವಂತಹದು. ದೇವೇಗೌಡರು ರಾಜ್ಯಸಭೆಗೆ ನೇಮಕವಾಗುವುದರಿಂದ ವೈಯಕ್ತಿಕವಾಗಿ ಮಾಜಿ ಪ್ರಧಾನಿ ಕುಟುಂಬಕ್ಕೆ ಆಗುವ ಲಾಭವೇನೂ ಇಲ್ಲ. ಆದರೆ ಇವರಿಗೆ ಬಿಜೆಪಿ ವರಿಷ್ಠರು ಉದ್ದೇಶಪೂರ್ವಕವಾಗಿಯೇ ಟಿಕೆಟ್ ನಿರಾಕರಿಸಿದರೆಂಬ ಮಾತುಗಳು ಈಗ ದಟ್ಟವಾಗಿ ಕೇಳಿ ಬರುತ್ತಿವೆ. ಇದು ಮೈತ್ರಿ ಕೂಟದ ಸಾಮರಸ್ಯವನ್ನು ಕೆಡಿಸುವ ಹಾದಿಯಲ್ಲಿದೆ.

ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವಣ ಮೈತ್ರಿಯಲ್ಲಿ ಎಲ್ಲವೂ ಸರಿಯಿಲ್ಲ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಬಿಜೆಪಿ ಮತ್ತು ದಳದ ನಡುವೆ ತಾಳಮೇಳವೇ ಇಲ್ಲ . ಮಿಗಿಲಾಗಿ ರಾಜ್ಯ ಸರ್ಕಾರದ ವಿರುದ್ದ ಕುಮಾರಸ್ವಾಮಿ ಮತ್ತು ದೇವೇಗೌಡರು ಮಾಡುವ ಟೀಕೆ ಮತ್ತು ವಾಗ್ದಾಳಿ ಬಿಟ್ಟರೆ ಬೇರೆ ಯವ ಕ್ರಿಯಾತ್ಮಕ ಆಂದೋಲನವೂ ರಾಜ್ಯದ ದಳಪತಿಗಳಿಂದ ಆಗಿಲ್ಲ .

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮೂನ್ನೆ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿದ್ದು, ರಾಜ್ಯದಲ್ಲಿ ಎರಡೂ ಪಕ್ಷಗಳು ಸಾಮರಸ್ಯದಿಂದ ಮನ್ನಡೆದರೆ ಮಾತ್ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧ್ಯ ಎಂಬುದು. ಆದರೆ ಪಕ್ಷದ ವರಿಷ್ಠರಿಗೆ ಟಿಕೆಟ್ ನೀಡುವ ವಿಚಾರದಲ್ಲಿಯೇ ಹೈಕಮಾಂಡ್ ಇಂತಹ ತೀರ್ಮಾನ ಕೈಗೊಂಡಾಗ ಇದು ಜೆಡಿಎಸ್ ಸಾಮಾನ್ಯ ಕಾರ್ಯಕರ್ತನ ಮನಸಿನ ಮೇಲೆ ನೆಗಟೀವ್ ಪರಿಣಾಮ ಬೀರುವುದು ಖಂಡಿತ. ಈ ಡ್ಯಾಮೇಜ್ ಕಂಟ್ರೋಲ್ ಮಾಡಲು ದೇವೇಗೌಡರ ಬಳಿ ಸದ್ಯಕ್ಕೆ ಯಾವ ಅಸ್ತ್ರವೂ ಇದ್ದಂತಿಲ್ಲ.

Related Posts

Leave a Reply

Your email address will not be published. Required fields are marked *