Menu

ವಸ್ತ್ರಸಂಹಿತೆಗೆ ಯಾಕಿಷ್ಟು ಪ್ರಾಮುಖ್ಯತೆ

ಶೈಕ್ಷಣಿಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಯೂನಿಫಾರಂ ಹೇಗಿರಬೇಕು.. ? ಇದು ಇಂದು- ನಿನ್ನೆಯ ಪ್ರಶ್ನೆಯಲ್ಲ. ದೇಶಕ್ಕೆ ಸ್ವರಾಜ್ಯ ಲಭಿಸಿದ ಆದಿಯಿಂದಲೂ ವಸ್ತ್ರ ಸಂಹಿತೆ ಎಂಬುದು ಈ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಸಂಗತಿ.

ಶಾಲೆಯ ಯೂನಿಫಾರಂ ಎಂಬುದು ಏಕರೂಪದ ಸಂಕೇತ. ಇದು ಭಾರತೀಯ ಸಂವಿಧಾನದಲ್ಲಿ ಅಡಕವಾಗಿರುವ ಸಂಗತಿ. ಸಂವಿಧಾನದ ಮುಂದೆ ವಿದ್ಯಾ ದೇಗುಲಕ್ಕೆ ಬರುವ ಪ್ರತಿಯೋರ್ವ ಕಲಿಕಾರ್ಥಿ ಕೂಡಾ ಸಮಾನ. ಕಲಿಕೆಯ ಸ್ಥಳದಲ್ಲಿ ಯರೂ ಕೀಳಲ್ಲ ಅಥವಾ ಮೇಲಲ್ಲ. ಸಮಾನತೆಯ ಮೊದಲ ಪಾಠಗಳು ಮಕ್ಕಳಿಗೆ ಆರಂಭವಾಗುವುದು ಪ್ರಾಥಮಿಕ ಹಂತದ ಶಿಕ್ಷಣದಿಂದಲೇ. ನಾವೆಲ್ಲರೂ ಒಂದೇ. ಜಾತಿ ಒಂದೇ .ಮತ ಒಂದೇ ಎಂಬುದು ಕವಿವಾಣಿ. ಅರ್ಧ ಶತಮಾನಕ್ಕೂ ಹಿಂದೆ ರಾಷ್ಟ್ರಕವಿ ಕುವೆಂಪು, ತಮ್ಮ ಹೃದಯಾಂತರಾಳದಿಂದ ಲೋಕಕ್ಕೆ ಸಾರಿದ ಅನುಭವವಾಣಿಯಿದು. ದುರಂತ ಎಂದರೆ ನಾಗರಿಕ ಲೋಕವಿಂದು ರಾಕೆಟ್ ವೇಗದಲ್ಲಿ ಬೆಳೆದರೂ, ನಾವೆಲ್ಲರೂ ಮನುಜರು ಮತ್ತು ಸಮಾನರು ಎಂಬ ಸದಾಶಯದ ಭಾವನೆ ಮಾತ್ರ ಸಮಾಜದ ಬಹುತೇಕ ಮಂದಿಯ ಹೃದಯಗಳಲ್ಲಿ ವಿಶಾಲವಾಗಿ ಅರಳದೇ ಹೋಗಿದ್ದು!

ಧರ್ಮ ಮತ್ತು ಮಾನವೀಯ ಮೌಲ್ಯಗಳು ಯಾವ ಧರ್ಮದ್ದು ಆದರೇನಂತೆ ? ಅದನ್ನು ನಾವು ಪಾಲಿಸಬೇಕಲ್ಲವೆ ? ಅರವತ್ತು ವರ್ಷಗಳ ಹಿಂದೆ ಸರ್ಕಾರಿ ಶಾಲೆಗಳೂ ಸೇರಿದಂತೆ ಖಾಸಗಿ ಶಾಲೆಗಳಲ್ಲಿಯೂ, ಸ್ವಾಮಿದೇವನೆ ಲೋಕಪಾಲನೆ, ಅಸತೋಮಾ ಸದ್ಗಮಯ, ಪ್ರಾರ್ಥನಾ ಗೀತೆಗಳಿಂದಲೇ ಶಾಲೆಗಳ ದೈನಂದಿನ ಚಟುವಟಿಕೆಗಳಿಗೆ ಚಾಲನೆ ದೊರೆಯುತ್ತಿತ್ತು. ಇದನ್ನು ಯಾರೂ ಅಂದು ಪೂರ್ವಾಗ್ರಹ ಭಾವನೆಯಿಂದ ನೋಡಲಿಲ್ಲ ! ಹಿಂದು, ಮುಸ್ಲಿಂ, ಕ್ರೈಸ್ತರೆಲ್ಲರೂ ಇಂತಹ ಪ್ರಾರ್ಥನಾ ಗೀತೆಗಳನ್ನು ಒಪ್ಪಿಕೊಂಡು ಸ್ವೀಕರಿಸಿ ಇಂದಿನ ಸಮಾಜದಲ್ಲಿ ದೊಡ್ಡವರಾದವರೇ . ಆದರೆ ಇಂದು ಕವಿ ರವೀಂದ್ರರು ಬರೆದ ಜನಗಣಮನ, ಇಕ್ಬಾಲ್ ಬರೆದ ಸಾರೇ ಜಹಾ ಸೆ ಅಚ್ಛಾ. ಇದರಲ್ಲಿ ಧರ್ಮ ಮತ್ತು ಜಾತಿಯನ್ನು ಗುರುತಿಸಿ ಕಾಮಾಲೆ ಕಣ್ಣಿಂದ ನೋಡುವುದಲ್ಲದೆ ಇದರಲ್ಲಿ ಹುಳುಕು ಕಂಡು ಹಿಡಿಯುವ ಜಾಯಮಾನವಿರುವ ಮತಾಂಧ ಮನಸ್ಕ ಸಮಾಜವಿಂದು ನಮ್ಮ ಸುತ್ತಲೂ ಆವರಿಸಿದೆ. ಧಾರ್ಮಿಕ ಭಾವನೆಗಳು ಮತ್ತು ಅವುಗಳಿಗೆ ಎಲ್ಲಿಲ್ಲದ ಮಾನ್ಯತೆ ನೀಡುವಂತಹ ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿರುವುದು ಕಳವಳಕಾರಿ.

ಸಹನೆ ಮತ್ತು ತಾಳ್ಮೆ – ಇವರೆಡೂ ಮಗುವಿನ ಕಲಿಕೆಯ ಸಮಯದಲ್ಲಿ ಪ್ರಮುಖ ಪಾತ್ರ ವಹಿಸುವ ವಿಷಯ. ಇದಕ್ಕೆ ಪೂರಕವಾದ ಸನ್ನಿವೇಶವನ್ನು ರೂಪಿಸುವುದು ಸರ್ಕಾರದ ಹೊಣೆ. ಇದು ಸಂಘ-ಸಂಸ್ಥೆಗಳ ಕೆಲಸವೂ ಹೌದು. ಸಹಬಾಳ್ವೆಯ ಪಾಠಗಳು ಆರಂಭವಾಗಬೇಕಿರುವುದು ಶಾಲೆಯ ಹಂತದಿಂದಲೇ. ಇದಕ್ಕೆ ವಿರುದ್ದವಾಗಿ ಧಾರ್ಮಿಕ ಅಜೆಂಡಾಗಳಿಗೆ ಅನುಗುಣವಾಗಿ ಶಾಲೆ -ಕಾಲೇಜುಗಳಲ್ಲಿ ಭಾವೋದ್ವೇಗ ವಾತಾವರಣ ನಿರ್ಮಾಣವಾಗಲು ಸರ್ಕಾರದ ತೀರ್ಮಾನಗಳು ಇದಕ್ಕೆ ನೀರೆರೆಯುವಂತೆ ಆಗಬಾರದು. ಹಿಜಾಬ್, ಜನಿವಾರ, ಶಿವದಾರಗಳ ಕುರಿತು ಸರ್ಕಾರಗಳು ಈ ಪ್ರಮಾಣದಲ್ಲಿ ಗಂಭೀರ ಚರ್ಚೆ ನಡೆಸುವ ಅಗತ್ಯವಿತ್ತೇ ? ಸರ್ಕಾರದ ಇಂದಿನ ತೀರ್ಮಾನಗಳೆಲ್ಲವೂ ವಿದ್ಯಾರ್ಥಿಗಳ ಕಲಿಕೆಗೆ ತೀರಾ ಅನಿವಾರ್ಯವಂತೂ ಆಗಿಲ್ಲ ಎಂಬುದು ವಾಸ್ತವ.

Related Posts

Leave a Reply

Your email address will not be published. Required fields are marked *