ದೇಶಾದ್ಯಂತ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದ ‘ನೀಟ್-ಯುಜಿ 2026’ ಪರೀಕ್ಷೆಯನ್ನು ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವು ಆಡಳಿತಾತ್ಮಕ ವೈಫಲ್ಯ ಮಾತ್ರವಲ್ಲ, ದೇಶದ ಯುವಜನತೆಗೆ ಬಗೆದ ಕ್ರೂರ ದ್ರೋಹವಾಗಿದೆ. ಕರ್ನಾಟಕದ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ದೇಶದ 22 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ತಿಂಗಳುಗಟ್ಟಲೆ ಶ್ರಮಪಟ್ಟು ಈ ಪರೀಕ್ಷೆ ಬರೆದಿದ್ದರು. ಪೋಷಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತರಬೇತಿ, ಪ್ರಯಾಣ ಸೇರಿದಂತೆ ಸಾಕಷ್ಟು ಖರ್ಚುಗಳನ್ನು ಮಾಡಿದ್ದರು. ಆದರೆ ಕೇಂದ್ರದ ಒಂದು ನಿರ್ಧಾರ ಇಡೀ ವಿದ್ಯಾರ್ಥಿ ಸಮುದಾಯವನ್ನು ಅನಿಶ್ಚಿತತೆ ಮತ್ತು ಸಂಕಷ್ಟಕ್ಕೆ ತಳ್ಳಿದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
2024ರಲ್ಲೇ ನಮ್ಮ ಸರ್ಕಾರವು ನೀಟ್ ಪರೀಕ್ಷೆಯು ಗ್ರಾಮೀಣ ಮತ್ತು ಬಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ. ಶಾಲಾ ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ದಾಖಲಾತಿ ವಿಚಾರದಲ್ಲಿ ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಸದನ ನಿರ್ಣಯ ಕೈಗೊಂಡಿದ್ದೆವು. ಅಂದಿನ ನಮ್ಮ ಕಾಳಜಿ ಎಷ್ಟು ಸತ್ಯ ಮತ್ತು ಅನಿವಾರ್ಯವಾಗಿತ್ತು ಎನ್ನುವುದನ್ನು ಇಂದಿನ ಪರೀಕ್ಷಾ ರದ್ದತಿಯು ಸಾಬೀತುಪಡಿಸಿದೆ ಎಂದಿದ್ದಾರೆ.
ನೇಮಕಾತಿ ಪರೀಕ್ಷೆಗಳಿಂದ ಹಿಡಿದು ರಾಷ್ಟ್ರೀಯ ಪ್ರವೇಶ ಪರೀಕ್ಷೆಗಳವರೆಗೆ ಪೇಪರ್ ಲೀಕ್ ಪ್ರಕರಣಗಳು ಪ್ರತಿಭಾವಂತ ವಿದ್ಯಾರ್ಥಿಗಳ ಹಿತ ರಕ್ಷಣೆಯಲ್ಲಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿವೆ. ಹೊಣೆ ಹೊರಬೇಕಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಮಾಧ್ಯಮಗಳಿಂದ ದೂರ ಉಳಿದಿದ್ದಾರೆ. ಯುವಜನತೆಯ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಪಾರದರ್ಶಕ, ಕಾಲಮಿತಿಯ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು. ಹೊಸ ಪರೀಕ್ಷಾ ವೇಳಾಪಟ್ಟಿಯ ಬಗ್ಗೆ ಕೂಡಲೇ ಸ್ಪಷ್ಟನೆ ನೀಡಬೇಕು ಮತ್ತು ಅಂತಹ ಪ್ರವೇಶ ಪರೀಕ್ಷೆಗಳನ್ನು ನಡೆಸುವ ರಾಜ್ಯಗಳ ಅಧಿಕಾರವನ್ನು ಪುನಃಸ್ಥಾಪಿಸಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಪೇಪರ್ ಲೀಕ್‌ನಿಂದ ತೊಂದರೆಗೀಡಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಪೋಷಕರ ಜೊತೆ ನಾವಿದ್ದೇವೆ. ಅವರ ಪರಿಶ್ರಮಕ್ಕೆ ತಕ್ಕ ಫಲ ಸಿಗುವಂತೆ ಮಾಡುವುದು ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.
ತ್ವರಿತವಾಗಿ ಕಾಮಗಾರಿಳು ಪೂರ್ಣಗೊಳಿಸಿ, ಗುಣಮಟ್ಟ ಕಾಪಾಡಿ
ಮೈಸೂರು ನಗರದ ಅಭಿವೃದ್ಧಿ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಳ್ಳುವ ಜೊತೆಗೆ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಮೈಸೂರಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿವೀಕ್ಷಣೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಕೆಪಿಟಿಸಿಎಲ್ ನ ವತಿಯಿಂದ ಸುಮಾರು 871 ಕಿ.ಮೀ. ಕೇಬಲ್ ಗಳನ್ನು ಹಾಕಲಾಗುತ್ತಿದ್ದು, ಇದುವರೆಗೆ 277 ಕಿ.ಮೀ.ಪೂರ್ಣಗೊಂಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂಧ ಮೈಸೂರು ನಗರದ ಸೌಂದರ್ಯೀಕರಣಕ್ಕೆ ಸಹಕಾರಿಯಾಗಿದೆ .ಮಹಾರಾಣಿ ಕಾಲೇಜಿನ ವಿದ್ಯಾರ್ಥಿ ನಿಲಯಗಳಿಗೆ ಸೂಕ್ತ ಸ್ಥಳಾವಕಾಶವಿರದ ಕಾರಣ, ಪ್ರಸ್ತುತ 1400 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊಸ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಲಾಗುತ್ತಿದೆ ಎಂದರು.
ನಗರದಲ್ಲಿ ಸುಮಾರು 50 ಕಿ.ಮೀ.ನ ರಸ್ತೆಯಲ್ಲಿ ವೈಟ್ ಟಾಪಿಂಗ್ ಮಾಡಲಾಗುತ್ತಿದ್ದು, ಇಂತಹ ರಸ್ತೆಗಳು ಸುಮಾರು 30 ವರ್ಷಗಳ ವರೆಗೆ ಸಂಚಾರಯೋಗ್ಯವಾಗಿರುತ್ತವೆ. ಮೊದಲನೇ ಹಂತದಲ್ಲಿ 4 ಪಥವಿರುವ ರಸ್ತೆಯಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಎರಡನೇ ಹಂತದಲ್ಲಿ ಉಳಿದ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲಾಗುವುದು. ಈ ರಸ್ತೆ ಕಾಮಗಾರಿಯಿಂದ ನಗರದಲ್ಲಿ ಸುಗಮ ಸಂಚಾರ ಹಾಗೂ ವಾಹನ ದಟ್ಟಣೆ ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.
ಕೇರಳದಲ್ಲಿ ಮುಖ್ಯಮಂತ್ರಿಗಳ ಆಯ್ಕೆಗೆ ಪಕ್ಷದ ವರಿಷ್ಠರು, ಅಲ್ಲಿನ ರಾಜಕೀಯ ನಾಯಕರೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ. ಕೇರಳಂನಲ್ಲಿ ಮೂರು ನಾಯಕರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದು, ಅವರಲ್ಲಿ ವಿ.ಡಿ.ಸತೀಶನ್ ಅವರನ್ನು ಕೇರಳ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ ಎಂದರು.


