ಕುಶಾಲನಗರದಲ್ಲಿರುವ ದುಬಾರೆ ಶಿಬಿರದಲ್ಲಿ ಸಾಕಾನೆಗಳ ಮಧ್ಯೆ ನಡೆದ ಕಾದಾಟಕ್ಕೆ ಪ್ರವಾಸಿ ಮಹಿಳೆ ಬಲಿಯಾಗಿರುವ ದಾರುಣ ಘಟನೆಯೊಂದು ನಡೆದಿದೆ.
ಚೆನ್ನೈನ ಜಿನ್ಮು (33) ಮೃತಪಟ್ಟ ಮಹಿಳೆ. ಸೋಮವಾರ (ಇಂದು) ಬೆಳಗ್ಗೆ ಮಹಿಳೆ ಹಾಗೂ ಪತಿ ಜೋಯಲ್ ದುಬಾರೆ ಸಾಕಾನೆ ಶಿಬಿರಕ್ಕೆ ಬಂದಿದ್ದರು. ಸಾಕಾನೆಗಳೊಂದಿಗೆ ಫೋಟೋ ತೆಗೆಸಿಕೊಂಡಿದ್ದರು. ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದಾಗ ಕೆಲವು ಪ್ರವಾಸಿಗರು ಸ್ನಾನ ಮಾಡಿಸಲು ಮುಂದಾಗಿದ್ದಾರೆ. ಜಿನ್ಮು ದಂಪತಿ ಕೂಡ ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದರು.
ಇದೇ ಸಮಯಕ್ಕೆ ಮಾರ್ತಾಂಡ ಹಾಗೂ ಕಂಜನ್ ಆನೆಗಳ ನಡುವೆ ನದಿಯಲ್ಲೇ ಕಾದಾಟ ಶುರುವಾಗಿದ್ದು, ವಿಕೋಪಕ್ಕೆ ತಿರುಗಿದೆ. ಕಾದಾಡುತ್ತಿರುವಾಗ ಮಾರ್ತಾಂಡ ಮಹಿಳೆಯ ಮೇಲೆ ಬಿದ್ದಿದೆ. ಆನೆ ಬಿದ್ದ ಪರಿಣಾಮ ಜಿನ್ಮು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಜೋಯಲ್‌ಗೆ ಗಂಭೀರ ಗಾಯಗಳಾಗಿವೆ. ಉಳಿದ ಪ್ರವಾಸಿಗರು ಜೋಯಲ್ ಅವರನ್ನು ಕುಶಾಲನಗರ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ.
ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ ಪ್ರವಾಸಿಗರು ಈ ದುರ್ಘಟನೆಯಿಂದ ಆಘಾತಗೊಂಡಿದ್ದಾರೆ. ಕಂಜನ್ ಆನೆ ಮೈಸೂರು ದಸರಾದಲ್ಲೂ ಇದೇ ರೀತಿ ಗಲಾಟೆ ಎಬ್ಬಿಸಿ ಅರಮನೆಯಿಂದ ಹೊರಗೆ ಓಡಿ ಬಂದಿತ್ತು. ಇದರಿಂದ ಜನ ಭಯಪಟ್ಟಿದ್ದರು. ದುಬಾರೆ ಸಾಕಾನೆ ಶಿಬಿರದಲ್ಲೂ ಸಾಕಾನೆಗಳ ಮೇಲೆ ದಾಳಿ ನಡೆಸಿತ್ತು.


