ಕುಡುಕ ಗಂಡಂದಿರ ಕಿರುಕುಳ ತಾಳಲಾರದೇ ಇಬ್ಬರು ಮಹಿಳೆಯರು ಪರಸ್ಪರ ಮಾದುವೆ ಆದ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗಂಡಂದಿರ ಕಿರುಕುಳದಿಂದ ಬೇಸತ್ತ ಕವಿತಾ ಹಾಗೂ ಗುಂಜಾ ಅಲಿಯಾಸ್ ಬಬ್ಲು ಮನೆ ತೊರೆದು ಬಂದು ಗೋರಖ್ ಪುರದ ಡಿಯೊರಾ ಎಂಬಲ್ಲಿ ಕಿರು ಕಾಶಿ ಎಂದೇ ಖ್ಯಾತವಾದ ಶಿವನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಕುಡಿದು ಬಂದ ಕಿರುಕುಳ ನೀಡುತ್ತಿದ್ದ ಪತಿಯರಿಂದ ಬೇಸತ್ತಿದ್ದ ಕವಿತಾ ಹಾಗೂ ಗುಂಜಾ ಇನ್ ಸ್ಟಾಗ್ರಾಂನಲ್ಲಿ ಪರಸ್ಪರ ಪರಿಚಯ ಆಗಿದ್ದಾರೆ. ಇಬ್ಬರು ತಮ್ಮ ನೋವು ತೋಡಿಕೊಂಡು ಹತ್ತಿರವಾಗಿದ್ದು, ಗಂಡನಿಂದ ಪಾರಾಗಲು ತಾವೇ ಮದುವೆ ಆಗಲು ನಿರ್ಧರಿಸಿದ್ದಾರೆ.
ಕವಿತಾ ಹಣಗೆ ಕುಂಕುಮ ಇರಿಸಿದ ಗುಂಜಾ ವರನ ರೀತಿ ನಡೆದುಕೊಂಡಿದ್ದಾರೆ. ಇಬ್ಬರು ಪರಸ್ಪರ ಹಾರ ಬದಲಾಯಿಸಿಕೊಂಡು ಸಪ್ತಪದಿ ತುಳಿದು ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
ಗಂಡಸರು ಪ್ರತಿನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದರು. ನಮಗೆ ಶಾಂತಿಯಿಂದ ಜೀವನ ನಡೆಸುವುದು ಬೇಕಾಗಿತ್ತು. ಹಾಗಾಗಿ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡು ನಮ್ಮ ಜೀವನ ನಡೆಸಲು ತೀರ್ಮಾನಿಸಿದ್ದೇವೆ ಎಂದು ಗುಂಜಾ ತಿಳಿಸಿದ್ದಾರೆ.
ಮನೆ ತೊರೆದು ಬಂದಿರುವ ಇಬ್ಬರು ಗೃಹಿಣಿಯರು ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದ್ದು, ಬಾಡಿಗೆ ಮನೆ ಹುಡುಕುತ್ತಿದ್ದಾರೆ. ಬಾಡಿಗೆ ಮನೆ ಮಾಡಿ ನಂತರ ಕೆಲಸಕ್ಕೆ ಸೇರಿ ತಮ್ಮದೇ ಜೀವನ ಕಟ್ಟಿಕೊಳ್ಳುವ ಭರವಸೆ ಹೊಂದಿದ್ದಾರೆ.
ದೇವಸ್ಥಾನದ ಪೂಜಾರಿ ಮದುವೆ ಬಗ್ಗೆ ಮಾಹಿತಿ ನೀಡಿದ್ದು, ದೇವಸ್ಥಾನಕ್ಕೆ ಇಬ್ಬರು ಬಂದಿದ್ದರು. ಬರುವಾಗ ಕೈಯಲ್ಲಿ ಹಾರ, ಕುಂಕುಮ ಎಲ್ಲಾ ತಂದಿದ್ದರು. ಅವರೇ ಹಾರ ಬದಲಿಸಿಕೊಂಡು ಕುಂಕುಮ ಇಟ್ಟುಕೊಂಡು ಮದುವೆ ಆದರು. ಅಲ್ಲಿ ನೆರೆದಿದ್ದವರು ಆಶ್ಚರ್ಯದಿಂದ ನೋಡುತ್ತಿದ್ದರು ಎಂದು ವಿವರಿಸಿದ್ದಾರೆ.