Menu

ರಾಜ್ಯಸಭೆಯಲ್ಲಿ ಎನ್‌ಡಿಎ ಸಂಖ್ಯಾ ಬಲ ಇನ್ನಷ್ಟು ಹೆಚ್ಚಳ

ಜಾರ್ಖಂಡ್ ರಾಜ್ಯಸಭಾ ಚುನಾವಣೆಯಲ್ಲಿ ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಪರಿಮಳ್ ನತ್ಲಾನಿ ಅವರ ಗೆಲುವಿನೊಂದಿಗೆ, ಮೇಲ್ಮನೆಯಲ್ಲಿ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)  ಸಂಖ್ಯಾಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತದ ಗಡಿಗೆ ಎನ್‌ಡಿಎ ಅತ್ಯಂತ ಸಮೀಪದಲ್ಲಿದೆ. ಜಾರ್ಖಂಡ್‌ನ ಈ ಗೆಲುವಿನ ಬಳಿಕ ರಾಜ್ಯಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಒಟ್ಟು ಸಂಖ್ಯೆ 153ಕ್ಕೆ ಏರಿಕೆಯಾಗಿದೆ. ಜಾರ್ಖಂಡ್‌ನ ಆಡಳಿತಾರೂಢ ’ಇಂಡಿಯಾ’ ಮೈತ್ರಿಕೂಟದಲ್ಲಿ ನಡೆದಿದೆ ಎನ್ನಲಾದ ಕ್ರಾಸ್ ವೋಟಿಂಗ್ (ಅಡ್ಡ ಮತದಾನ) ಹಿನ್ನೆಲೆಯಲ್ಲಿ ಈ ಜಯ ಲಭಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಮುಂಬರುವ ದಿನಗಳಲ್ಲಿ ಮಹಿಳಾ ಮೀಸಲಾತಿ ಜಾರಿ ಮತ್ತು ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆಯಂತಹ ಪ್ರಮುಖ ಸಾಂವಿಧಾನಿಕ ಸುಧಾರಣೆಗಳು ಚರ್ಚೆಗೆ ಬರಲಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ರಾಜ್ಯಸಭೆ ಸದಸ್ಯರ ಸಂಖ್ಯೆ  241 ಆಗಿದೆ (ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನ ನಾಲ್ಕು ಸ್ಥಾನಗಳು ಖಾಲಿ ಇವೆ). ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಸುಲಭವಾಗಿ ಅಂಗೀಕರಿಸಲು ಆಡಳಿತಾರೂಢ ಮೈತ್ರಿ ಕೂಟಕ್ಕೆ ಕನಿಷ್ಠ 164 ಸದಸ್ಯರ ಬೆಂಬಲದ ಅಗತ್ಯವಿದೆ. ತೃಣಮೂಲ ಕಾಂಗ್ರೆಸ್ ಸಂಸದರ ರಾಜೀನಾಮೆಯಿಂದ ತೆರವಾಗಿರುವ ಪಶ್ಚಿಮ ಬಂಗಾಳದ ನಾಲ್ಕೂ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ನಿರೀಕ್ಷೆಯಿದ್ದು, ಆಗ ಎನ್‌ಡಿಎ ಬಲ 157ಕ್ಕೇರಲಿದೆ. ಆದರೂ, ಮ್ಯಾಜಿಕ್ ಸಂಖ್ಯೆಗಿಂತ ಎನ್‌ಡಿಎ 7 ಸ್ಥಾನಗಳ ಕೊರತೆಯನ್ನು ಎದುರಿಸಲಿದೆ.

ಎನ್‌ಡಿಎ ಮೈತ್ರಿಕೂಟ (153): ಬಿಜೆಪಿ- 115, ಟಿಡಿಪಿ- 4, ಜೆಡಿಯು- 4, ಎಐಎಡಿಎಂಕೆ-4, ಎನ್‌ಸಿಪಿ- 4, ಶಿವಸೇನೆ-2, ಇತರ ಪ್ರಾದೇಶಿಕ ಪಕ್ಷಗಳು, ನಾಮನಿರ್ದೇಶಿತ ಹಾಗೂ ಪಕ್ಷೇತರ ಸದಸ್ಯರು ಒಳಗೊಂಡಿದ್ದಾರೆ. ಯೂಪಿಪಿಎಲ್ ಮತ್ತು ಝಡ್‌ಪಿಎಂ ಪಕ್ಷಗಳು ಹೊರಗಿನಿಂದ ಬೆಂಬಲ ನೀಡುತ್ತಿವೆ.
’ಇಂಡಿಯಾ’ ಮೈತ್ರಿಕೂಟ (63):  ಕಾಂಗ್ರೆಸ್- 30, ತೃಣಮೂಲ ಕಾಂಗ್ರೆಸ್- 09, ಸಮಾಜವಾದಿ ಪಕ್ಷ- 4, ಸಿಪಿಎಂ- 3, ಜೆಎಂಎಂ- 3 ಸೇರಿದಂತೆ ಇತರ ವಿರೋಧ ಪಕ್ಷಗಳು.

ತಟಸ್ಥ ಪ್ರಾದೇಶಿಕ ಪಕ್ಷಗಳು (25): ಡಿಎಂಕೆ- 8, ಬಿಜೆಡಿ- 5, ವೈಎಸ್‌ಆರ್‌ಸಿಪಿ- 4, ಆಪ್- 3, ಬಿಆರ್‌ಎಸ್- 3, ಬಿಎಸ್‌ಪಿ- 1 ಮುಂತಾದ ಪಕ್ಷಗಳು ಯಾವುದೇ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿಲ್ಲ.

ಯಾವುದೇ ಮೈತ್ರಿಕೂಟಕ್ಕೆ ಸೇರದೆ ತಟಸ್ಥವಾಗಿ ಉಳಿದಿರುವ ಪ್ರಾದೇಶಿಕ ಪಕ್ಷಗಳ ನಿಲುವು  ಅತ್ಯಂತ ಪ್ರಮುಖವಾಗಿದೆ.  ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಪಾರ್ಟಿ  ಈ ಹಿಂದೆ ಹಲವು ಪ್ರಮುಖ ಮಸೂದೆಗಳಿಗೆ ವಿಷಯಾಧಾರಿತ ಬೆಂಬಲ ನೀಡಿದೆ. ವೈಎಸ್‌ಆರ್‌ಸಿಪಿಯ 4 ಸದಸ್ಯರು ಬೆಂಬಲಿಸಿದರೆ ಎನ್‌ಡಿಎ ಸಂಖ್ಯಾಬಲ 161ಕ್ಕೆ ತಲುಪಲಿದ್ದು, ಸಾಂವಿಧಾನಿಕ ತಿದ್ದುಪಡಿ ತರಲು  3 ಮತಗಳಷ್ಟೇ ಬಾಕಿ ಉಳಿಯಲಿವೆ.

ರಾಜ್ಯಸಭೆಯಲ್ಲಿ ಎನ್‌ಡಿಎ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ಲೋಕಸಭೆಯಲ್ಲಿ ಸಾಂವಿಧಾನಿಕ ತಿದ್ದುಪಡಿ ತರಲು ಕನಿಷ್ಠ 363 ಸದಸ್ಯರ (ಮೂರನೇ ಎರಡರಷ್ಟು) ಬೆಂಬಲ ಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಎನ್‌ಡಿಎ ಲೋಕಸಭೆಯಲ್ಲಿ ಈ ಸಂಖ್ಯೆಗಿಂತ ಸಾಕಷ್ಟು ಹಿಂದೆ ಇರುವುದರಿಂದ, ಬೃಹತ್ ಸಾಂವಿಧಾನಿಕ ಸುಧಾರಣೆಗಳನ್ನು ತರಲು ಮೋದಿ ಸರ್ಕಾರಕ್ಕೆ ಇತರ ರಾಜಕೀಯ ಪಕ್ಷಗಳ ವ್ಯಾಪಕ ಸಹಮತ ಮತ್ತು ಬೆಂಬಲ ಅತ್ಯಗತ್ಯವಾಗಿದೆ.

Related Posts

Leave a Reply

Your email address will not be published. Required fields are marked *