ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ವೇಳೆ ಟೀಂ ಇಂಡಿಯಾದ ಡ್ರೆಸ್ಸಿಂಗ್ ಕೋಣೆಯ ಮಾಹಿತಿ ಬಹಿರಂಗಪಡಿಸಿದ್ದು ಸರ್ಫರಾಜ್ ಖಾನ್ ಎಂದು ಬಿಸಿಸಿಐ ಸಭೆಯಲ್ಲಿ ಕೋಚ್ ಗೌತಮ್ ಗಂಭೀರ್ ಆರೋಪಿಸಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಡ್ರೆಸ್ಸಿಂಗ್ ರೂಮ್ನಲ್ಲಿ ಗಂಭೀರ್ ಮತ್ತು ಹಿರಿಯ ಆಟಗಾರರ ನಡುವೆ ಭಿನ್ನಮತ ಉಂಟಾಗಿದೆ ಎಂದು ಆಸ್ಟ್ರೇಲಿಯಾ ಸರಣಿ ವೇಳೆ ದೊಡ್ಡ ಸುದ್ದಿಯಾಗಿತ್ತು. ರೋಹಿತ್ ಶರ್ಮಾ, ಕೊಹ್ಲಿ ಜೊತೆ ಗಂಭೀರ್ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಲಾಗುತ್ತಿತ್ತು. ಇತ್ತೀಚೆಗೆ ನಡೆದ ಪರಾಮರ್ಶೆ ಸಭೆಯಲ್ಲಿ, ಡ್ರೆಸ್ಸಿಂಗ್ ರೂಮ್ ಮಾಹಿತಿಗಳನ್ನು ಸರ್ಫರಾಜ್ ಬಹಿರಂಗಪಡಿಸಿದ್ದಾರೆ ಎಂದು ಗಂಭೀರ್ ಆರೋಪಿಸಿದ್ದಾರೆ ಎನ್ನಲಾಗಿದೆ.
ಇದೇ ಕಾರಣಕ್ಕೆ ಬಿಸಿಸಿಐ ಅಧಿಕಾರಿಗಳು ಸರ್ಫರಾಜ್ ಖಾನ್ ಬಗ್ಗೆ ಅಸಮಾಧಾನ ಹೊಂದಿದ್ದರಿಂದ ಸರ್ಫರಾಜ್ ಸರಣಿಗೆ ಆಯ್ಕೆಯಾಗಿದ್ದರೂ ಯಾವುದೇ ಪಂದ್ಯ ಆಡಲು ಅವಕಾಶ ಸಿಕ್ಕಿರಲಿಲ್ಲ.
ಸಿಡ್ನಿ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ವಯಂ ಕೊನೆಯ ಟೆಸ್ಟ್ ಪಂದ್ಯದಿಂದ ಹಿಂದೆ ಸರಿದಿದ್ದರು. ಆದರೆ ರೋಹಿತ್ ಶರ್ಮಾ ಅವರನ್ನು ಕೋಚ್ ಗೌತಮ್ ಗಂಭೀರ್ ಅವರೇ ಪಂದ್ಯದಿಂದ ಕೈ ಬಿಟ್ಟಿದ್ದು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಸಿಡ್ನಿ ಟೆಸ್ಟ್ ಪಂದ್ಯ ಗೆಲ್ಲಲು ಟೀಂ ಇಂಡಿಯಾಗೆ ಸಾಧ್ಯವಾಗಿರಲಿಲ್ಲ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಪರ್ತ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರೂ ಉಳಿದ 4 ಪಂದ್ಯಗಳ ಪೈಕಿ ಮೂರರಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವು ಗೆಲುವು ಸಾಧಿಸಿತ್ತು. ದಶಕದ ಬಳಿಕ ಟೆಸ್ಟ್ ಸರಣಿ ಆಸ್ಟ್ರೇಲಿಯಾ ತಂಡ ಯಶಸ್ವಿಯಾಗಿತ್ತು.
ಆಸ್ಟ್ರೇಲಿಯಾ ಸರಣಿ ವೇಳೆ ಸಹಾಯಕ ಕೋಚ್ ಮೋರ್ಕೆಲ್ ವಿರುದ್ಧವೂ ಗಂಭೀರ್ ಕಿಡಿಕಾರಿದ್ದಾರೆ. ಮೋರ್ಕೆಲ್ ಅಭ್ಯಾಸಕ್ಕೆ ತಡವಾಗಿ ಬಂದಿದ್ದರು. ಹೀಗಾಗಿ ಮೈದಾನದಲ್ಲೇ ಮೋರ್ಕೆಲ್ಗೆ ಗಂಭೀರ್ ಛೀಮಾರಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.