ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಸುಂಟಿಕೊಪ್ಪದ ಚೆಸ್ಕಾಂ ಕಚೇರಿ ಸಮೀಪ ನಡೆದಿದೆ.
ಅಸ್ಸಾಂನ ಸಿರಾಜು ರೆಹಮಾನ್ ಮತ್ತು ಜಹನಾರ್ ದಂಪತಿ ಕೂಲಿ ಕೆಲಸಕ್ಕಾಗಿ ಸುಂಟಿಕೊಪ್ಪಕ್ಕೆ ಬಂದು ಹೊಸ ಬಡಾವಣೆಯಲ್ಲಿ ನೆಲೆಸಿದ್ದರು. ಇವರ ಪುತ್ರಿ ಮುಸುಮತ್ ಪಿಂಕಿಕತ್ತುಲ್ (6) ಹೆದ್ದಾರಿ ಬದಿಯ ಅಂಗಡಿಯೊಂದರಲ್ಲಿ ಮಿಠಾಯಿ ಖರೀದಿಸಲು ತೆರಳಿದ್ದಳು. ಮಿಠಾಯಿ ಖರೀದಿಸಿದ ಬಳಿಕ ರಸ್ತೆ ದಾಟಲು ಮುಂದಾದಾಗ ಮೈಸೂರು-ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಬಾಲಕಿಗೆ ಡಿಕ್ಕಿ ಹೊಡೆದಿದೆ.
ಅಪಘಾತದಲ್ಲಿ ಗಾಯಗೊಂಡ ಬಾಲಕಿಯನ್ನು ಸ್ಥಳೀಯರು ಸುಂಟಿಕೊಪ್ಪ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ಆಸ್ಪತ್ರೆ ತಲುಪುವ ಮುನ್ನವೇ ಬಾಲಕಿ ಮೃತಪಟ್ಟಿದ್ದಾಳೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.


