Menu

ಕೊಡಗಿನಲ್ಲಿ ಮತ್ತೆ ಮಳೆ ಬಿರುಸು: ಹಾರಂಗಿಯಿಂದ 5,365 ಕ್ಯೂಸೆಕ್‌ ನದಿಗೆ

ಕೊಡಗಿನಲ್ಲಿ ಮಳೆ ಮತ್ತೆ ಬಿರುಸು ಪಡೆದುಕೊಂಡಿದ್ದು, ಹಾರಂಗಿ ಜಲಾಶಯದಿಂದ 5,365 ಕ್ಯೂಸೆಕ್‌ ನೀರನ್ನು ಕಾವೇರಿ ನದಿಗೆ ಬಿಡಲಾಗಿದೆ.

ಬುಧವಾರದಿಂದ ಜಿಲ್ಲೆಯಾದ್ಯಂತ ತೀವ್ರ ಗಾಳಿ- ಮಳೆ ಸುರಿಯುತ್ತಿದ್ದು, ಕಾವೇರಿ ನದಿಯ ನೀರಿನ ಮಟ್ಟವೂ ಏರಿಕೆಯಾಗಿದೆ. ಹಾರಂಗಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಕಾವೇರಿ ನದಿಯ ತಗ್ಗು ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ 4,613 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. ಒಳಹರಿವು ಹೆಚ್ಚಿದ ಕಾರಣ 5,365 ಕ್ಯೂಸೆಕ್ಸ್ ನೀರು
ಕಾವೇರಿ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇನ್ನಷ್ಟು ದಿನ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಬೆಳಗಾವಿಯ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಬೆಳಗಾವಿ ಮಹಾನಗರದ ಜನರು ಮುಂದಿನ 1 ವರ್ಷದವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಿಸಬೇಕಿಲ್ಲ ಎಂದು ನಿಟ್ಟುಸಿರು ಬಿಡುವಂತಾಗಿದೆ.

ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಲಾದ ರಕ್ಕಸಕೊಪ್ಪ ಜಲಾಶಯವು ಅರ್ಧ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಗೋಕಾಕ್ ಫಾಲ್ಸ್, ಬಟವಾಡೆ ಜಲಪಾತದಲ್ಲಿ ನೀರು ಧುಮ್ಮುಕ್ಕುತ್ತಿದೆ.

Related Posts

Leave a Reply

Your email address will not be published. Required fields are marked *