ಪ್ರತಿಪಕ್ಷಗಳ ಗದ್ದಲದ ಮಧ್ಯೆಯೇ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ.
ಕೇಂದ್ರ ಸರ್ಕಾರವು ಹಿಂದಿನ ಅನುಭವದ ಆಧಾರದ ಮೇಲೆ ಪರೀಕ್ಷಾ ದುಷ್ಕೃತ್ಯದ ವಿರುದ್ಧ ಸುರಕ್ಷತೆಗಳನ್ನು ಬಲಪಡಿಸುವ ಇಚ್ಛೆಯನ್ನು ಈ ಶಾಸನವು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಲಾಗಿದೆ.
ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ಗೆ ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದು ಇದಕ್ಕೆ ಉತ್ತರ ನೀಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು. ಪ್ರತಿಭಟನೆಗಳು ನಡುವೆಯೇ ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಸಚಿವ ಜಿತೇಂದ್ರ ಸಿಂಗ್, ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿನ ತಿದ್ದುಪಡಿಗಳು ಸಾರ್ವಜನಿಕ ಪರೀಕ್ಷೆಗಳ ಸಮಗ್ರತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಬದ್ಧತೆ ಪ್ರದರ್ಶಿಸುತ್ತದೆ ಎಂದು ಹೇಳಿದರು.
ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆ (ಅಕ್ರಮ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ಅನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಸರ್ಕಾರ ತ್ವರಿತವಾಗಿ ಕಾರ್ಯನಿರ್ವಹಿಸಿದೆ ಮತ್ತು ಸಾರ್ವಜನಿಕ ಪರೀಕ್ಷೆಗಳ ಸಮಗ್ರತೆಯನ್ನು ಬಲಪಡಿಸಲು ಬದ್ಧವಾಗಿದೆ ಎಂದು ಹೇಳಿದರು
ಹೊಸ ಮಸೂದೆ ಕುರಿತ ಚರ್ಚೆ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಳಸಿದ ಈಡಿಯಟ್ ಪದ ವಿವಾದಕ್ಕೆ ಕಾರಣವಾಯಿತು. ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಪರಿಣಾಮ ಸದನದಲ್ಲಿ ಕೆಲಕಾಲ ಗದ್ದಲವಯಂಟಾಯಿತು.
ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದವನ್ನು ಉಲ್ಲೇಖಿಸಿದ ರಾಹುಲ್, “ಮುಕ್ತ ಮನಸ್ಸಿನಿಂದ ಸತ್ಯವನ್ನು ಹುಡುಕುವವರೇ ನಿಜವಾದ ವಿದ್ಯಾರ್ಥಿಗಳು. ಆದರೆ ಎಲ್ಲವೂ ನಮಗೆ ಗೊತ್ತಿದೆ ಎಂದು ಭಾವಿಸುವ ಇನ್ನೊಂದು ವರ್ಗವಿದೆ, ಅದು ಈಡಿಯೆಟ್, ಆ ಈಡಿಯೆಟ್ ಅನ್ನು ನಂಬುವವವರು ಅಂಧ ಭಕ್ತ ” ಎಂದು ವಿದ್ಯಾರ್ಥಿನಿ ಹೇಳಿದ್ದಾಗಿ ಉಲ್ಲೇಖಿಸಿದರು. ರಾಹುಲ್ ಗಾಂಧಿ ಅವರು ಬಳಸಿದ “ಇಡಿಯಟ್” ಹಾಗೂ “ಅಂಧಭಕ್ತ” ಪದಗಳು ಸದನದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.
ಬಿಜೆಪಿ ಸ್ನೇಹಿತರೂ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ವಿದ್ಯಾರ್ಥಿಗಳ ಪ್ರತಿಭಟನಾ ಅಭಿವ್ಯಕ್ತಿಯನ್ನು ಗೌರವಿಸಬೇಕು. ಬಿಜೆಪಿ ನಾಯಕರು ತಮ್ಮ ಮಕ್ಕಳನ್ನೇ ಕೇಳಿದರೂ, ವಿದ್ಯಾರ್ಥಿಗಳ ಹೋರಾಟವನ್ನು ಅವರು ಬೆಂಬಲಿಸುತ್ತಾರೆ. ನಡೆದಿರುವುದರಲ್ಲಿ ತಪ್ಪೇನೂ ಇಲ್ಲ. ಪ್ರತಿಯೊಬ್ಬ ಭಾರತೀಯರೂ ಈ ಹೋರಾಟದ ಬಗ್ಗೆ ಹೆಮ್ಮೆಪಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.


