ಬೆಂಗಳೂರಿನ ನಾನಾ ಕಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ 9 ಮಹಿಳೆಯರನ್ನು ರಕ್ಷಿಸಿದ್ದಾರೆ. ಬಿಇಎಲ್ ಬಡಾವಣೆಯಲ್ಲಿ ಹೈಫೈ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು ಹೊರ ರಾಜ್ಯದಿಂದ ಕೆಲಸಕ್ಕೆ ಬರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಕೆಲಸದ ಆಸೆ ತೋರಿಸಿ ವೇಶ್ಯಾವಾಟಿಕೆ ದಂಧೆಗೆ ದೂಡುತ್ತಿದ್ದರು ಎನ್ನಲಾಗಿದೆ.
ಮನೆ ಮಾಲೀಕರ ಬಳಿ ಮಹಿಳೆಗೆ ಪತಿ ಇಲ್ಲ ಎಂದು ಹೇಳಿ ಬಾಡಿಗೆಗೆ ಪಡೆದ ಬಳಿಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಗಿರಾಕಿಗಳನ್ನು ಫೋನ್ ಮೂಲಕ ಸಂಪರ್ಕಿಸಿ ಆರೋಪಿಗಳು ಮನೆಗೆ ಕರೆಸುತ್ತಿದ್ದರು.
ವಿದೇಶಿ ಮತ್ತು ಹೊರ ರಾಜ್ಯದ ಯುವತಿಯರನ್ನು ಇಟ್ಟುಕೊಂಡು ಆರೋಪಿಗಳು ದಂಧೆ ನಡೆಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಮಹಿಳಾ ಸಂರಕ್ಷಣಾ ಘಟಕ ದಾಳಿ ನಡೆಸಿ, ಇಬ್ಬರು ಮಹಿಳೆಯರನ್ನೂ ಬಂಧಿಸಿದೆ. ಬ್ಯಾಡರಹಳ್ಳಿ ಠಾಣೆಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಂಪಿಗೆಹಳ್ಳಿ, ಕೆಆರ್ ಪುರಂ, ರಾಮಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಲಾಗಿದ್ದು ಹೋಟೆಲ್, ಅಪಾರ್ಟ್ಮೆಂಟ್, ಮನೆಗಳಲ್ಲಿ ದಂಧೆ ನಡೆಸುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.