Menu

ರಾಜ್ಯದಲ್ಲಿ ಕಾನೂನು ರಕ್ಷಕರೇ ಭಕ್ಷಕರು, ಬೆಂಗಳೂರು ಭ್ರಷ್ಟಾಚಾರದ ಕೇಂದ್ರ: ಆರ್‌ ಅಶೋಕ

ರಾಜ್ಯದಲ್ಲಿ ಕಾನೂನು ರಕ್ಷಕರೇ ಭಕ್ಷಕರು, ಬೆಂಗಳೂರು ಭ್ರಷ್ಟಾಚಾರದ ಕೇಂದ್ರ, ಜನಸಾಮಾನ್ಯರು ಅಪರಾಧಿಗಳಿಗಿಂತ ಹೆಚ್ಚು ಭಯಪಡುವುದು ಕಾನೂನು ಕಾಪಾಡಬೇಕಾದ ವ್ಯವಸ್ಥೆಗೆ ಎಂಬ ಪರಿಸ್ಥಿತಿ ಇದೆ. ಪೊಲೀಸ್ ಇಲಾಖೆ ಕುರಿತಂತೆ ಮಾಧ್ಯಮಗಳಲ್ಲಿ  ವರದಿಯಾಗಿರುವ ಅಂಕಿ-ಅಂಶಗಳು ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಬೆಚ್ಚಿಬೀಳಿಸುವ ಸತ್ಯವನ್ನು ಬಯಲಿಗೆಳೆಯುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಕಿಡಿ ಕಾರಿದ್ದಾರೆ.

@siddaramaiah ನವರ ನೇತೃತ್ವದ @INCKarnataka ಸರ್ಕಾರದ ಅವಧಿಯಲ್ಲಿ ಪೊಲೀಸ್ ಇಲಾಖೆ ಶಿಸ್ತು, ನೈತಿಕತೆ ಮತ್ತು ಜನವಿಶ್ವಾಸ ಕಳೆದುಕೊಂಡು ಭ್ರಷ್ಟಾಚಾರದ ಕೆಸರಿನಲ್ಲಿ ಮುಳುಗಿದೆಯೇ ಎಂಬ ಗಂಭೀರ ಪ್ರಶ್ನೆ  ರಾಜ್ಯದ ಜನರ ಮುಂದಿದೆ. ಎರಡು ವರ್ಷಗಳಲ್ಲಿ  713 ಪೊಲೀಸ್ ಅಧಿಕಾರಿಗಳ ಅಮಾನತು ಎಂದರೆ ಇದು ಯಾರೋ ಕೆಲವರ ವೈಯಕ್ತಿಕ ತಪ್ಪಲ್ಲ, ಸಂಪೂರ್ಣ ವ್ಯವಸ್ಥೆಯೇ ಕುಸಿದುಬಿದ್ದಿದೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

95 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ.  ಜನರನ್ನು ರಕ್ಷಿಸಬೇಕಾದವರೇ ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿದ್ದರೆ ಸಾಮಾನ್ಯ ನಾಗರಿಕರು ಯಾರನ್ನು ನಂಬಬೇಕು? ಸುರಕ್ಷತೆಯ ಸಂಕೇತವಾಗಿರಬೇಕಾದ ಖಾಕಿ, ಇಂದು ಭಯ ಮತ್ತು ಅನುಮಾನಗಳ ಪ್ರತೀಕವಾಗುತ್ತಿರುವುದೇಕೆ, ದರೋಡೆ, ಕಳ್ಳತನ, ಕೊಲೆ ಆರೋಪಗಳಲ್ಲೂ ಪೊಲೀಸರ ಹೆಸರು ಕೇಳುವುದಕ್ಕೂ ನಾಚಿಕೆಯಾಗುತ್ತದೆ.  ಕಾನೂನು ಜಾರಿ ಮಾಡಬೇಕಾದವರೇ ಕಾನೂನನ್ನ ಗಾಳಿಗೆ ತೂರಿ ಉಲ್ಲಂಘಿಸಲು ಆರಂಭಿಸಿದರೆ ರಾಜ್ಯದಲ್ಲಿ ನ್ಯಾಯ ಹೇಗೆ ಉಳಿಯುತ್ತದೆ ಎಂದು ಪ್ರಶ್ನಿಸಿದ್ದಾರೆ.

ಅಮಾನತುಗೊಂಡವರಲ್ಲಿ ಬಹುಪಾಲು ಅಧಿಕಾರಿಗಳು ಬೆಂಗಳೂರಿನವರೇ ಎಂಬ ಸಂಗತಿ ಆತಂಕಕಾರಿ. ದೇಶದ ತಂತ್ರಜ್ಞಾನ ರಾಜಧಾನಿ ಎಂದು ಹೆಮ್ಮೆಪಡುವ ನಗರದಲ್ಲಿ ಕಾನೂನು ಸುವ್ಯವಸ್ಥೆ ಈ ಮಟ್ಟಿಗೆ ಹದಗೆಟ್ಟರೆ ಬೆಂಗಳೂರಿನ ಬ್ರ್ಯಾಂಡ್ ವ್ಯಾಲ್ಯೂ, ವರ್ಚಸ್ಸಿಗೆ ಧಕ್ಕೆಯಾಗುವುದಿಲ್ಲವೇ, 400ಕ್ಕೂ ಹೆಚ್ಚು ಅಧಿಕಾರಿಗಳು ತಪ್ಪಿತಸ್ಥರೆಂದು ಸಾಬೀತಾಗಿದೆ.  ಇದು ಕೇವಲ ಆರೋಪಗಳ ಹಂತದಲ್ಲಿಲ್ಲ. ವಿಭಾಗೀಯ ತನಿಖೆಗಳಲ್ಲೇ ತಪ್ಪಿತಸ್ಥರೆಂದು ಸಾಬೀತಾದರೂ, ಈ ಸರ್ಕಾರ ಯಾವ ಕಠಿಣ ಕ್ರಮ ತೆಗೆದುಕೊಂಡಿದೆ ಎಂದು ಕೇಳಿದ್ದಾರೆ.

ಇಂದು ಜನರಲ್ಲಿ ಮೂಡಿರುವ ಭಯ ಏನೆಂದರೆ, ರೌಡಿ ಶೀಟರ್‌ಗಳ ಜೊತೆ ಕೈಜೋಡಿಸುವವರು, ನಕಲಿ ದಾಖಲೆಗಳ ಜಾಲ ನಡೆಸುವವರು, ಅಮಾಯಕರ ಮೇಲೆ ದೌರ್ಜನ್ಯ ಎಸಗುವವರು ಕಾನೂನಿನ ಭಯವಿಲ್ಲದೆ ಸಂಚರಿಸುತ್ತಿದ್ದಾರೆ ಎಂಬುದು. ಇದು ಕೇವಲ ಪೊಲೀಸ್ ಇಲಾಖೆಯ ವೈಫಲ್ಯವಲ್ಲ, ಇದು ಗೃಹ ಇಲಾಖೆಯ ಸಂಪೂರ್ಣ ದಿವಾಳಿತನ! ಸಿದ್ದರಾಮಯ್ಯನವರೇ, ಗ್ಯಾರೆಂಟಿ ಸರ್ಕಾರದಲ್ಲಿ ರಾಜ್ಯದ ಜನರಿಗೆ ಜೀವ, ಆಸ್ತಿ ಮತ್ತು ಮಾನದ ರಕ್ಷಣೆಗಾಗಿ ಗ್ಯಾರಂಟಿ ಯಾರು ನೀಡುತ್ತಾರೆ? ಈ ಸರ್ಕಾರ ಅಪರಾಧಿಗಳನ್ನು ನಿಯಂತ್ರಿಸುತ್ತಿದೆಯೇ? ಅಥವಾ ಅಪರಾಧಿಗಳಿಗೆ ರಾಜಕೀಯ ರಕ್ಷಣೆ ನೀಡುತ್ತಿದೆಯೇ? ಖಾಕಿಯ ಮೇಲಿನ ಜನರ ನಂಬಿಕೆಯನ್ನು ನಾಶಮಾಡಿದ ಈ ವ್ಯವಸ್ಥೆಯನ್ನು ತಕ್ಷಣವೇ ಶುದ್ಧೀಕರಿಸಬೇಕು. ಇಲ್ಲದಿದ್ದರೆ ಕರ್ನಾಟಕದ ಜನರ ಆಕ್ರೋಶವೇ ಈ ಸರ್ಕಾರವನ್ನು ಅಧಿಕಾರದ ಕುರ್ಚಿಯಿಂದ ಕೆಳಗಿಳಿಸುವ ದಿನ ದೂರವಿಲ್ಲ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *