ರಾಜ್ಯದ ಹಿತಕ್ಕಾಗಿ ಬಂದ್ ವಾಪಸ್ ಪಡೆದಿರುವ ಎಲ್ಲಾ ಸಂಘಟನೆಗಳಿಗೆ ಧನ್ಯವಾದಗಳು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದರು. ಸಂಘಟನೆಗಳು ಕರೆ ನೀಡಿದ್ದ ಬಂದ್ ಹಿಂಪಡೆದ ಬಗ್ಗೆ ಕೇಳಿದಾಗ,”ಎಲ್ಲಾ ಕನ್ನಡಪರ ಸಂಘಟನೆಗಳ ಮುಖಂಡರು ನನ್ನನ್ನು ಭೇಟಿ ಮಾಡಿ ಬಂದ್ ಹಿಂಪಡೆದಿರುವ ಬಗ್ಗೆ ಮಾಹಿತಿ ನೀಡಿದರು. ರಾಜ್ಯದ ಜನರ ಹಿತ ಹಾಗೂ ರೈತರ ಕಲ್ಯಾಣಕ್ಕೆ ಸಂಬಂಧಿಸಿದಂತೆ ಅವರು ಕೆಲವು ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಗಳನ್ನು ಪರಿಶೀಲನೆ ಮಾಡುವೆ. ಅವರ ಸಹಕಾರಕ್ಕೆ ಕೃತಜ್ಞತೆ ಎಂದು ಹೇಳಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್‌ಗೆ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸಾರ್ವಜನಿಕರು ಹಾಗೂ ಪ್ರಮುಖ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡದ ಕಾರಣ ರಾಜ್ಯದ ಬಹುತೇಕ ಕಡೆಗಳಲ್ಲಿ ಜನಜೀವನ ಸಹಜವಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಸಂಚಾರ ಸುಗಮವಾಗಿದೆ. ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘ ಹಾಗೂ ಕರುನಾಡ ಸೇನೆ ಸೇರಿದಂತೆ ಕೆಲವು ಒಕ್ಕೂಟಗಳು ಬೆಂಬಲಿಸಿವೆ. ಕರವೇ ನಾರಾಯಣ ಗೌಡ ಬಣ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಶಾಲೆಗಳ ಒಕ್ಕೂಟಗಳು ಬಂದ್ ಬೆಂಬಲಿಸಿಲ್ಲ.
ಓಲಾ – ಊಬರ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಫಿಲಂ ಚೇಂಬರ್ ಸೇರಿದಂತೆ ಹಲವು ಸಂಸ್ಥೆಗಳು ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ಕಾರ್ಯ ನಿರ್ವಹಿಸುತ್ತಿವೆ. ಮಂಡ್ಯ ಹಾಗೂ ಮೈಸೂರಲ್ಲಿಯೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯದಲ್ಲಿ ಸಾರಿಗೆ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟು ಬಂದ್ ಆಗಿವೆ, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೈಸೂರಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಬಸ್‌ಗಳ ಸಂಚಾರ ಎಂದಿನಂತೆ ಇವೆ. ಮಳೆ ಬಂದು ಜಲಾಶಯದಲ್ಲಿ ನೀರು ತುಂಬಿದ್ದರಿಂದ ಸಂಘಟನೆಗಳು ಬಂದ್ ಕೈ ಬಿಟ್ಟಿವೆ.
ಹೋಟೆಲ್, ವರ್ತಕರ ಸಂಘ ಹಾಗೂ ಕಾರ್ಮಿಕರು, ಆಟೋ-ಕ್ಯಾಬ್ ಚಾಲಕರ ಸಂಘದಿಂದ ನೈತಿಕ ಬೆಂಬಲ ಕೊಡಲಾಗಿದೆ. ಮಂಡ್ಯ ಜಿಲ್ಲಾಡಳಿತ ಮದ್ಯ ಮಾರಾಟದ ಮೇಲೆ ನಿರ್ಬಂಧಗಳನ್ನು ವಿಧಿದೆ. ಕೆ.ಆರ್. ಪೇಟೆ, ಶ್ರೀರಂಗಪಟ್ಟಣ, ಮದ್ದೂರು ಹಾಗೂ ಮಂಡ್ಯ ತಾಲೂಕುಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.


