ನೀಡಿರುವ ಎಚ್ಚರಿಕೆ ನಡುವೆಯೂ ಬಹಿರಂಗ ಹೇಳಿಕೆ ನೀಡುತ್ತಿರುವ ಕರ್ನಾಟಕದ ಕಾಂಗ್ರೆಸ್ ಸಚಿವರಿಗೆ ಸಂಬಂಧಿಸಿದಂತೆ ವರದಿಯನ್ನು ಹೈಕಮಾಂಡ್ ಕೇಳಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ತಿಳಿಸಿದ್ದು, ಸಚಿವ ಸತೀಶ್ ಜಾರಕಿಹೊಳಿ, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಹೈಕಮಾಂಡ್ ಆದೇಶ ಉಲ್ಲಂಘಸುವವರು ಕಾಂಗ್ರೆಸ್ನ ಶಿಸ್ತಿನ ಸಿಪಾಯಿಗಳಲ್ಲ ಎಂದು ಹೈಕಮಾಂಡ್ ಹೇಳಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ, ಸಚಿವರ ಬದಲಾವಣೆ ಹೈಕಮಾಂಡ್ ನಾಯಕರು ನಿರ್ಧಾರ ಮಾಡಲಿದ್ದಾರೆ. ಈ ಸಂಬಂಧ ಸಚಿವರು ಹೇಳಿಕೆ ಕೊಡಬಾರದು. ನಾಯಕತ್ವ ಬದಲಾವಣೆಯ ತೀರ್ಮಾನ ತೆಗೆದುಕೊಳ್ಳುವುದು ಮಾಧ್ಯಮಗಳಲ್ಲ, ಪಕ್ಷದ ಹೈಕಮಾಂಡ್. ಪಕ್ಷದ ನಾಯಕರು ಮೊದಲಿಗೆ ಹೈಕಮಾಂಡ್ ನಾಯಕರ ಗಮನಕ್ಕೆ ತರಬೇಕು. ಇಂತಹ ಹೇಳಿಕೆ ನೀಡಿರುವವರ ವರದಿಯನ್ನು ಹೈಕಮಾಂಡ್ ನಾಯಕರು ಕೇಳಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದಾರೆ. ಸಚಿವರು ಅನಗತ್ಯ ಗೊಂದಲ ಉಂಟು ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುವವರ ಸಂಪೂರ್ಣ ವರದಿ ನೀಡಿ ಎಂದು ಹೈಕಮಾಂಡ್ ಕೇಳಿದೆ. ಸಚಿವರಾದ ತಿಮ್ಮಾಪುರ, ಸತೀಶ್ ಜಾರಕಿಹೊಳಿ ಹಾಗೂ ಹೆಚ್ಸಿ ಮಹದೇವಪ್ಪ ಅವರು ಪದೇ ಪದೆ ಮಾತನಾಡುತ್ತಿದ್ದು, ಹೈಕಮಾಂಡ್ ಗಂಭೀರವಾಗಿ ಎಲ್ಲವನ್ನೂ ಗಮನಿಸುತ್ತಿದೆ. ಎಲ್ಲ ಸಚಿವರ ರಿಪೋರ್ಟ್ ಕಾರ್ಡ್ಗಳನ್ನು ಸಹ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಪಕ್ಷದ ಆದೇಶ ಉಲ್ಲಂಘನೆ ಮಾಡುವವರಿಗೆ ಮುಂದಿನ ದಿನಗಳಲ್ಲಿ ಪರಿಣಾಮ ತಟ್ಟಲಿದೆ ಎಂದು ಮಂಜುನಾಥ್ ಭಂಡಾರಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.