ಕೇರಳದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಅವರ ಹೆಸರನ್ನು ಎಐಸಿಸಿ ಘೋಷಿಸಿದೆ. ಕೇರಳ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ವಿ.ಡಿ ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಹೆಸರು ಪ್ರಮುಖವಾಗಿ ಸಿಎಂ ರೇಸ್‌ನಲ್ಲಿ ಕೇಳಿ ಬಂದಿದ್ದವು.
ಎಐಸಿಸಿ ಕೇರಳ ಉಸ್ತುವಾರಿ ದೀಪಾ ದಾಸ್ಮುನ್ಸಿ ಹಾಗೂ ಪಕ್ಷದ ಕೇಂದ್ರ ವೀಕ್ಷಕ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿಕ್ ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಹೆಸರು ಪ್ರಕಟಿಸಿದ್ದಾರೆ. ಘೋಷಣೆಗೆ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪಕ್ಷದ ಹಿರಿಯ ನಾಯಕರೊಂದಿಗೆ ಕೊನೆಯ ಹಂತದ ಸಮಾಲೋಚನೆ ನಡೆಸಿದ್ದರು.
ಏಪ್ರಿಲ್ 9ರಂದು ಕೇರಳ ವಿಧಾನಸಭಾ ಚುನಾವಣೆ ನಡೆದಿದ್ದು,ಫಲಿತಾಂಶ ಮೇ 4ರಂದು ಪ್ರಕಟಗೊಂಡಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 140 ವಿಧಾನಸಭಾ ಸ್ಥಾನಗಳಲ್ಲಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಡಳಿತಾರೂಢ ಎಲ್ಡಿಎಫ್ 35 ಸ್ಥಾನ ಪಡೆಯುವ ಮೂಲಕ ಸೋತಿದೆ.
ಕೇರಳ ರಾಜ್ಯದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆದಿದೆ. ಇದು ತುಂಬಾ ಒಳ್ಳೆಯ ನಿರ್ಧಾರ ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಸನ್ನಿ ಜೋಸೆಫ್ ಪ್ರತಿಕ್ರಿಯೆ ನೀಡಿದ್ದಾರೆ.


