ಕೆಎಂಎಫ್ ಆಡಳಿತ ಮಂಡಳಿ ವಿರುದ್ಧ ಅಧಿಕಾರಿಗಳು ಹಾಗೂ ನೌಕರರು ಫೆಬ್ರವರಿ 1ರಿಂದ ಮುಷ್ಕರ ನಡೆಸಲು ನಿರ್ಧರಿಸಿದ್ದು, ಮುಷ್ಕರಕ್ಕೆ ಮುಂದಾದ್ರೆ ಕೆಎಂಎಫ್ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಅಧಿಕಾರಿಗಳು ಮತ್ತು ನೌಕರರು ಏಳನೇ ವೇತನ ಆಯೋಗ ವರದಿಯಂತೆ ವೇತನ ನೀಡುವಂತೆ ಆಗ್ರಹಿಸುತ್ತಿದ್ದು, ಕೆಎಂಎಫ್ ಆಡಳಿತ ಮಂಡಳಿ ಸ್ಪಂದಿಸಿಲ್ಲ ಎನ್ನಲಾಗಿದೆ.
ಫೆ 1 ರಿಂದ ಕೆಎಂಎಫ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದಾರೆ. ರಾಜ್ಯಾದ್ಯಂತ 1300 ಕ್ಕೂ ಹೆಚ್ಚು ಅಧಿಕಾರಿ-ನೌಕರರು ಕೆಎಂಎಫ್ ನಲ್ಲಿ ಸೇವೆಯಲ್ಲಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ, ನೌಕರರಿಗೆ ಈಗಾಗಲೇ ಏಳನೇ ವೇತನ ಆಯೋಗದ ವರದಿ ಶಿಫಾರಸಿನಂತೆ ಪೂರ್ಣ ಪ್ರಮಾಣದಲ್ಲಿ ಪರಿಷ್ಕೃತ ವೇತನ ಜಾರಿ ಮಾಡಲಾಗಿದೆ. ಕೆಎಂಎಫ್ ಅಧಿಕಾರಿ, ನೌಕರರಿಗೆ ಶೇ.17ರಷ್ಟು ಮಾತ್ರ ವೇತನ ಹೆಚ್ಚಳ ಮಾಡಲಾಗಿದ್ದು, ಶೇ.8ರಷ್ಟು ವೇತನ ಹೆಚ್ಚಳ ಬಾಕಿ ಉಳಿದಿದೆ. ಮೂರ್ನಾಲ್ಕು ತಿಂಗಳಿನಿಂದ ಪೂರ್ಣ ಪ್ರಮಾಣದಲ್ಲಿ ವೇತನ ಹೆಚ್ಚಿಸುವಂತೆ ಒತ್ತಾಯಿಸಿದರೂ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿಲ್ಲ ಎಂದು ಸಂಘ ಆರೋಪಿಸಿದೆ.
ಪರಿಷ್ಕೃತ ಶ್ರೇಣಿ- ವೇತನ ಸೌಲಭ್ಯಗಳನ್ನ 2024 ಅಕ್ಟೋಬರ್ 1 ರಿಂದ ಜಾರಿಗೊಳಿಸಲು ಆದೇಶಿಸಬೇಕು ಎಂಬುದು ನೌಕರರ ಆಗ್ರಹವಾಗಿದೆ. ಸಚಿವ ಕೆ.ಎನ್.ರಾಜಣ್ಣ ಅವರು ಕೆಎಂಎಫ್ ಅಧಿಕಾರಿ ಮತ್ತು ನೌಕರರಿಗೆ ಬಾಕಿಯಿರುವ ವೇತನವನ್ನು ಹೆಚ್ಚಳ ಮಾಡಿಕೊಡುತ್ತೇವೆ ಎಂದಿದ್ದಾರೆ. ಸದ್ಯದಲ್ಲೇ ಸಮಸ್ಯೆ ಇತ್ಯರ್ಥ ಪಡಿಸುತ್ತೇವೆ. ಫೆ.1ಕ್ಕೆ ಮುಷ್ಕರ ಇರುವುದಿಲ್ಲ. ಎಂದಿನಂತೆ ಹಾಲು, ಮೊಸರು ಸೇರಿ ಹಾಲಿನ ಉತ್ಪನ್ನಗಳ ಸರಬರಾಜು, ಮಾರಾಟ ಇರಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಹೇಳಿದ್ದಾರೆ.