ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” ಹಾಡಲು ನಿರ್ದಿಷ್ಟ ಧಾಟಿ ಮತ್ತು ಕಾಲಮಿತಿ ನಿಗದಿ ಪಡಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಸರ್ಕಾರದ ಈ ಆದೇಶ ವಿಚಾರದಲ್ಲಿ ಮಧ್ಯೆ ಪ್ರವೇಶಿಸಲು ನ್ಯಾಯಾಲಯವು ನಿರಾಕರಿಸಿದ್ದು, ಸಲ್ಲಿಕೆಯಾಗಿದ್ದ ವಿಶೇಷ ಅರ್ಜಿಯನ್ನು ವಜಾಗೊಳಿಸಿದೆ.
ಸೆಪ್ಟೆಂಬರ್ 2022ರಲ್ಲಿ ಅಂದಿನ ಕರ್ನಾಟಕ ಸರ್ಕಾರವು ನಾಡಗೀತೆಯನ್ನು ಗಾಯಕ ದಿ. ಮೈಸೂರು ಅನಂತಸ್ವಾಮಿ ಸಂಯೋಜಿಸಿರುವ ಧಾಟಿಯಲ್ಲೇ ಹಾಡಬೇಕು ಮತ್ತು ಅದರ ಒಟ್ಟು ಅವಧಿ 2 ನಿಮಿಷ 30 ಸೆಕೆಂಡ್ ಇರಬೇಕು ಎಂದು ಅಧಿಕೃತ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು, ಸರ್ಕಾರವು ಯಾವುದೇ ನಿರ್ದಿಷ್ಟ ರಾಗ ಅಥವಾ ಧಾಟಿಯಲ್ಲೇ ನಾಡಗೀತೆ ಹಾಡಬೇಕು ಎಂದು ಕಡ್ಡಾಯ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್, ಶಿಕ್ಷಣ ಕಾಯ್ದೆಯಡಿ ಇಂತಹ ನಿಯಮಗಳನ್ನು ರೂಪಿಸುವ ಪೂರ್ಣ ಅಧಿಕಾರ ಸರ್ಕಾರಕ್ಕಿದೆ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತ್ತು.
ಹೈಕೋರ್ಟ್ ನೀಡಿದ್ದ ಇದೇ ತೀರ್ಪನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದ್ದು, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಬಲವಾದ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು, ನಾಡಗೀತೆಯನ್ನು ಹಾಡುವಾಗ ಅದರ ರಾಗ ಮತ್ತು ಅವಧಿ ಎರಡರಲ್ಲೂ ಏಕರೂಪತೆ ಇರಬೇಕಾದುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದ್ದು, ಸರ್ಕಾರದ ಆದೇಶದಿಂದ ಯಾವುದೇ ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲ. ತಜ್ಞರು ರೂಪಿಸಿರುವ ರಾಗವನ್ನು ಸರ್ಕಾರ ಅಧಿಕೃತಗೊಳಿಸಿರುವುದರಲ್ಲಿ ತಪ್ಪಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


