Menu

ನೇಪಾಳ ಪ್ರವಾಹ: ಸಿಲುಕಿರುವ ಕನ್ನಡಿಗರಿಗೆ ಸಿಎಂ ಡಿಕೆ ಶಿವಕುಮಾರ್ ಅಭಯ

ಧೈರ್ಯವಾಗಿರಿ. ಸುರಕ್ಷಿತ ಸ್ಥಳದಲ್ಲಿ ಇರುವುದರಿಂದ ಹೊರ ಬರುವ ಪ್ರಯತ್ನ ಮಾಡುವುದು ಬೇಡ. ನಿಮ್ಮ ಜೊತೆ ನಮ್ಮ ಸರ್ಕಾರವಿದೆ. ನಿಮ್ಮ ಸಂಕಷ್ಟಕ್ಕೆ ನಾವು ಸ್ಪಂದಿಸುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ನೇಪಾಳ ದುರಂತದಲ್ಲಿ ಬದುಕುಳಿದ ಕನ್ನಡಿಗ ಮಲ್ಲಿನಾಥ್ ಅವರಿಗೆ ಧೈರ್ಯ ತುಂಬಿದರು.

ನವದೆಹಲಿಯ ಪ್ರವಾಸದಲ್ಲಿರುವ ಸಿಎಂ ಅವರು,ಅಲ್ಲಿಂದಲೇ ವೀಡಿಯೊ ಕರೆ ಮಾಡಿ ಮಾತನಾಡಿ, ಸಂಕಷ್ಟದಲ್ಲಿರುವ ಕನ್ನಡಿಗರ ಆತ್ಮಸ್ಥೈರ್ಯ ಹೆಚ್ಚಿಸಿದರು. ಕರ್ನಾಟಕದಿಂದ ನೇಪಾಳ ಪ್ರವಾಸಕ್ಕೆ ಹೊರಟವರ ಸಂಪರ್ಕ ಕಡಿತವಾಗಿದೆ. ಹುಡುಕಾಟದ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಯಾರೂ ಕೂಡ ಎದೆಗುಂದುವ ಅಗತ್ಯವಿಲ್ಲ. ನಾವೆಲ್ಲ ಕನ್ನಡಿಗರು. ನಮ್ಮ ಸರ್ಕಾರ ನಿಮ್ಮ ಜೊತೆಯಲ್ಲಿರುತ್ತದೆ ಎಂದು ಹೇಳಿದರು.

ಪ್ರವಾಹದಲ್ಲಿ ಸಿಲುಕಿದ್ದ ಕಲಬುರಗಿಯ ಚಿಚಂಚೋಳಿ ತಾಲೂಕಿನ ಮಲ್ಲಿನಾಥ್‌ ಕೊಲಕುಂದಿ ಹಾಗೂ ಸಂಗಮೇಶ್‌ ಕನಕಪುರ ಎಂಬವರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ಸಂಪರ್ಕಿಸಿದ್ದು, ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ರಕ್ಷಿಸಲಾದ ಕನ್ನಡಿಗರನ್ನು ನೇಪಾಳದಿಂದ ನವದೆಹಲಿಗೆ ಕರೆತರಲು ರಾಜ್ಯ ಸರ್ಕಾರ ಅಗತ್ಯ ವ್ಯವಸ್ಥೆ ಕೈಗೊಳ್ಳುತ್ತಿದೆ.

ನೇಪಾಳದ ಭೀಕರ ಪ್ರವಾಹ ಹಾಗೂ ಭೂಕುಸಿತದಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ಹಾಗೂ ಮಾಹಿತಿ ಸಂಗ್ರಹಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಮತ್ತು ಸಂಚಾರ ವ್ಯವಸ್ಥೆ ಕೊಚ್ಚಿ ಹೋಗಿದೆ. ಹಲವು ಭಾರತೀಯರು ನಾಪತ್ತೆಯಾಗಿದ್ದಾರೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಕ್ಷಣಾ ಕಾರ್ಯಕ್ಕೆ ಅಲ್ಲಿ ಸಿಲುಕಿರುವ ಕನ್ನಡಿಗರು ಹಾಗೂ ಅವರ ಕುಟುಂಬಸ್ಥರ ವಿವರಗಳನ್ನು ಕಲೆಹಾಕುತ್ತಿದೆ. ನೇಪಾಳ ಅಥವಾ ಟಿಬೆಟ್ ಭಾಗದಲ್ಲಿ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಿತರು ಸಿಲುಕಿಕೊಂಡಿದ್ದರೆ, ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ಪ್ರಾಧಿಕಾರಕ್ಕೆ ಒದಗಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಗೂಗಲ್‌ ಫಾರಂನಲ್ಲಿ ವಿವರ ತುಂಬುವಂತೆ ಕೋರಲಾಗಿದೆ.

Related Posts

Leave a Reply

Your email address will not be published. Required fields are marked *