ನೇಪಾಳ ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ಈಗಾಗಲೇ ನಲುಗಿದ್ದು, ಮತ್ತೊಂದು ಪ್ರವಾಹದ ಅಪಾಯ ಎದುರಾಗಿದೆ. ಭೋಟೆ ಕೋಶಿ ನದಿಯ ಮೂಲದ ಸಮೀಪ ಮತ್ತೊಂದು ತಡೆ ಜಲಾಶಯ ನಿರ್ಮಾಣ ಆಗಿರುವುದರಿಂದ ಕೆಳ ಭಾಗದಲ್ಲಿ ಭಾಗದಲ್ಲಿ ಪ್ರವಾಹದ ಅಪಾಯ ಎದುರಾಗಿದೆ.
ಈ ತಡೆ ಜಲಾಶಯ ಒಡೆದರೆ ನದಿಯಲ್ಲಿ ಬೃಹತ್ ನೀರಿನ ಅಲೆ ಉಂಟಾಗಿ ಕೆಳಭಾಗದ ಪ್ರದೇಶಗಳಿಗೆ ಅಪಾಯವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಭಾರಿ ಪ್ರಮಾಣದ ಅವಶೇಷಗಳು ಕಣಿವೆಯಲ್ಲಿ ನೀರಿನ ಹರಿವಿಗೆ ತಡೆಯಾಗಿರುವುದರಿಂದ ಮತ್ತೊಂದು ಪ್ರವಾಹ ಸೃಷ್ಟಿಯಾಗುವ ಆತಂಕವುಂಟಾಗಿದೆ.
ಕಠ್ಮಂಡುವಿನಲ್ಲಿರುವ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟನ್ ಡೆವಲಪ್‌ಮೆಂಟ್‌ನ ಹವಾಮಾನ ಮತ್ತು ಪರಿಸರ ಅಪಾಯ ವಿಭಾಗದ ಮುಖ್ಯಸ್ಥ ಕಿಯಾಂಗ್‌ಗಾಂಗ್ ಝಾಂಗ್, ನೇಪಾಳ-ಚೀನಾ ಗಡಿ ಭಾಗದ ನದಿಯಲ್ಲಿ ತಡೆ ಉಂಟಾಗಿರುವುದರಿಂದ ಎರಡನೇ ಪ್ರವಾಹ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ. ಈಗಾಗಲೇ ಸಂಭವಿಸಿರುವ ಭೂಕುಸಿತದಿಂದ ಉಂಟಾದ ಅವಶೇಷಗಳ ಹಿಂದೆ ನೀರು ಸಂಗ್ರಹವಾಗಿ ಸರೋವರದ ಗಾತ್ರ ಹೆಚ್ಚುತ್ತಿದೆ, ಜನರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದ್ದಾರೆ.
ಪ್ರವಾಹ ಮತ್ತು ಭೂಕುಸಿತದಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ ಗುರುವಾರ 469ಕ್ಕೆ ಏರಿಕೆಯಾಗಿದೆ. 1,400ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 290 ಮಂದಿ ಭಾರತೀಯರು ಎಂದು ತಿಳಿದು ಬಂದಿದೆ.
ರಕ್ಷಣಾ ತಂಡಗಳು ಕೆಸರು ಹಾಗೂ ಅವಶೇಷಗಳ ನಡುವೆ ಸಿಲುಕಿರುವವರಿಗಾಗಿ ಶೋಧ ಕಾರ್ಯ ಮುಂದುವರಿಸಿವೆ. 389 ಮಂದಿ ನೇಪಾಳದಲ್ಲಿ ಹಾಗೂ ಉಳಿದವರು ನೆರೆಯ ಟಿಬೆಟ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆಡಳಿತ ಮಾಹಿತಿ ನೀಡಿದೆ.
ಹೆಲಿಕಾಪ್ಟರ್‌ಗಳ ಮೂಲಕ 50 ವಿದೇಶಿಯರು ಸೇರಿದಂತೆ 796 ಮಂದಿಯನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ರಕ್ಷಿಸಲಾಗಿದೆ. 796 ಮಂದಿಯನ್ನು ಭೂಮಾರ್ಗದ ಮೂಲಕ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನೇಪಾಳ-ಟಿಬೆಟ್ ಗಡಿ ಸಮೀಪ ಹಿಮ-ಬಂಡೆಗಳ ಭಾರೀ ಕುಸಿತವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೀರು, ಕೆಸರು ಮತ್ತು ಅವಶೇಷಗಳು ಮಧ್ಯ ನೇಪಾಳದತ್ತ ಹರಿದು ಪಟ್ಟಣಗಳು ಹಾಗೂ ಗ್ರಾಮಗಳನ್ನು ನಾಶಪಡಿಸಿವೆ. ಮನೆಗಳು, ವಾಹನಗಳು, ರಸ್ತೆಗಳು ಮತ್ತು ಸೇತುವೆಗಳು ಕೊಚ್ಚಿಹೋಗಿದ್ದು, ಜಲವಿದ್ಯುತ್ ಯೋಜನೆಗಳಿಗೂ ವ್ಯಾಪಕ ಹಾನಿಯಾಗಿದೆ.


