ಸಿಜೆಐ ಹಸ್ತದಿಂದ ನಾವು ಕಾನೂನಿನ ಡಿಗ್ರಿ ಪಡೆಯುವುದಿಲ್ಲ ಎಂದೂ ಜೆನ್‌ಜಿ ಈಗ ರಚ್ಚೆ ಹಿಡಿದಿದೆ. ಸಾಂದರ್ಭಿಕವಾಗಿ ಸಿಜೆಐ ಸೂರ್ಯಕಾಂತ್ , ಆಡಿದ್ದಾರೆನ್ನಲಾದ ಮಾತುಗಳಿಗೆ ಮುಂದೊಂದು ದಿನ ಇವರೇ ಬಹಿರಂಗವಾಗಿ ಉತ್ತರಿಸುವ ಗಳಿಗೆಯೂ ಬಂದೀತು. ದೇಶದ ಸಿಜೆಐ ಹಸ್ತದಿಂದ ಜೆನ್‌ಜೀ ಪದವಿ ಪತ್ರ ಸ್ವೀಕರಿಸಿದ ಮಾತ್ರಕ್ಕೆ, ಇವರ ನಿಲುವು ಮತ್ತು ಧೋರಣೆಗೆ ಅತಿ ದೊಡ್ಡ ಪೆಟ್ಟಾಗುವುದೆಂದು ಯಾಕೆ ಭಾವಿಸಬೇಕು ?
ಜೆನ್ ಜೀಗೆ ತಾಳ್ಮೆ ಮತ್ತು ಸಹನೆಯೂ ಮುಖ್ಯ. ಏಕಮುಖ ಮತ್ತು ಏಕಪಕ್ಷೀಯ ಧೋರಣೆ ಸರಿಯೇ ಎಂಬ ವಿವೇಚನೆ ಕೂಡಾ ಮುಖ್ಯ. ಈ ದೇಶದ ಸುಪ್ರೀಂಕೋರ್ಟ್ – ಇಡೀ ಭಾರತೀಯ ನ್ಯಾಯಾಂಗ ವ್ಯವಸ್ಥೆಯನ್ನು ಪ್ರತಿನಿಧಿಸುವಂತಹ ಸರ್ವೋನ್ನತ ಸ್ವತಂತ್ರ ಸಂಸ್ಥೆ. ಸಂವಿಧಾನದ ಒಂದು ಪ್ರಮುಖ ಅಂಗ. ಇಂತಹ ಸಂಸ್ಥೆಯ ಹೊಣೆಗಾರಿಕೆ ಹೊತ್ತ ಮುಖ್ಯ ನ್ಯಾಯಮೂರ್ತಿ , ನ್ಯಾಯಾಲಯದೊಳಗೆ ಹೇಳಿದ ಕೆಲವೊಂದು ಮಾತುಗಳನ್ನು ಅವರೇ ಖುದ್ದು ಬೀದಿಯಲ್ಲಿ ನಿಂತು ತಾನು ಹೇಳಿದ್ದು ತಪ್ಪು ಎಂದು ಕ್ಷಮೆಯಾಚಿಸಲು ಸಾಧ್ಯವಿಲ್ಲ.
ಸುಪ್ರೀಂಕೋರ್ಟ್ ಎಂದರೆ ಇದಕ್ಕೆ ಸಂವಿಧಾನದಡಿ ಗೌರವ , ಘನತೆ ಇದೆ. ಸಿಜೆಐ ಸೂರ್ಯಕಾಂತ್ ಓಪನ್ ಕೋರ್ಟ್‌ನಲ್ಲಿ ಹೇಳಿದ ಒಂದು ಮಾತಿನಿಂದ, ಹುದ್ದೆಯ ಘನತೆ ಮತ್ತು ಗೌರವಕ್ಕೆ ಅಪಚಾರ ಎಸಗುವ ರೀತಿಯಲ್ಲಿ ಜೆನ್ ಜೀ ನಡೆದುಕೊಳ್ಳುವುದು ಸರಿಯೇ ? ಬ್ರಿಟಿಷರು ತಮ್ಮ ಮೇಲೆ ಲಾಠಿ ಬೀಸಿದಾಗ ಗಾಂಧಿ ಮಹಾತ್ಮ, ಬಿಳಿಯರ ವಿರುದ್ಧ ಕೈ ಮಾಡಲಿಲ್ಲ. ಹೀಯಾಳಿಸಿ ಮಾತನಾಡಲಿಲ್ಲ. ಬ್ರಿಟಿಷರ ಕಠಿಣ ಕ್ರಮ ಮತ್ತು ಮಾತಿಗೆ ಗಾಂಧಿ ಅಂದು ತಾಳಿದ ನಿಸ್ಸೀಮ ಮೌನ ಮತ್ತು ಅಹಿಂಸಾ ನಡೆಯೇ ಆಡಳಿತಾರೂಢ ವ್ಯಕ್ತಿಗಳಿಗೆ ಚಡಿಯೇಟು ಆಗಿತ್ತು. ಹೈದರಾಬಾದ್‌ನಲ್ಲಿರುವ ಕಾನೂನು ಕಾಲೇಜಿನ ಸ್ನಾತಕೋತ್ತರ ಪದವಿ ಪ್ರದಾನ ಘಟಿಕೋತ್ಸವಕ್ಕೆ ಸಿಜೆಐ ಸೂರ್ಯಕಾಂತ್ ಅತಿಥಿಯಾಗಿ ಬರುವುದೇ ಬೇಡ ಎಂದು ಜೆನ್‌ಜೀ ಈಗ ಬಿಗಿಪಟ್ಟು ಹಿಡಿದಿದೆ. ಸಿಜೆಐ ಹಸ್ತದಿಂದ ನಾವು ಕಾನೂನಿನ ಡಿಗ್ರಿ ಪಡೆಯುವುದಿಲ್ಲ ಎಂದೂ ಜೆನ್‌ಜಿ ಈಗ ರಚ್ಚೆ ಹಿಡಿದಿದೆ.
ಸಾಂದರ್ಭಿಕವಾಗಿ ಸಿಜೆಐ ಸೂರ್ಯಕಾಂತ್ , ಆಡಿದ್ದಾರೆನ್ನಲಾದ ಮಾತುಗಳಿಗೆ ಮುಂದೊಂದು ದಿನ ಇವರೇ ಬಹಿರಂಗವಾಗಿ ಉತ್ತರಿಸುವ ಗಳಿಗೆ ಬಂದೀತು. ದೇಶದ ಸಿಜೆಐ ಹಸ್ತದಿಂದ ಜೆನ್‌ಜೀ ಪದವಿ ಪತ್ರ ಸ್ವೀಕರಿಸಿದ ಮಾತ್ರಕ್ಕೆ, ಇವರ ನಿಲುವು ಮತ್ತು ಧೋರಣೆಗೆ ಅತಿ ದೊಡ್ಡ ಪೆಟ್ಟಾಗುವುದೆಂದು ಯಾಕೆ ಭಾವಿಸಬೇಕು? ಸ್ವರಾಜ್ಯಪೂರ್ವ ಭಾರತದಲ್ಲಿ ಯಾರು ತುಂಡುಪಂಚೆದಾರಿ ಗಾಂಧಿಯ ಮೇಲೆ ಲಾಠಿ ಬೀಸಿ ಅಪಮಾನ, ದೌರ್ಜನ್ಯ ಎಸಗಿದರೋ, ಅಂತಹ ಬ್ರಿಟಿಷ್ ಸಾಮ್ರಾಜ್ಯವೇ ಮಹಾತ್ಮನಿಗೆ ರೆಡ್‌ಕಾರ್ಪೆಟ್ ಹಾಕಿ ಲಂಡನ್ ದುಂಡು ಮೇಜಿನ ಪರಿಷತ್ ಸಭೆಗೆ ಗೌರವಪೂರ್ಣವಾಗಿ ಆಹ್ವಾನಿಸಿತಲ್ಲವೇ ?
ಇತಿಹಾಸ ಎಂಬುದು ಯಾವಾಗಲೂ ಹಿರಿಯ ಸ್ಥಾನದಲ್ಲಿ ಕುಳಿತಿರುತ್ತೆ. ಕಿರಿಯರಿಗಿದು ದಾರಿದೀಪ. ಹಿರಿಯರು ಮತ್ತು ಇತಿಹಾಸದಲ್ಲಿ ಒಳ್ಳೆಯ ಅಂಶವಿದ್ದಲ್ಲಿ ಜೆನ್‌ಜೀ ಅದನ್ನು ಅನುಸರಿಸಲಿ. ಹಿರಿಯರು ಹೇಳಿದ್ದೆಲ್ಲವೂ ಸರ್ವೋತ್ತಮವಲ್ಲವೆಂಬುದೂ ನಿಜ. ಹಾಗೆಂದು ಈ ದೇಶದಲ್ಲಿ ವಯಸು ಆದವರೆಲ್ಲರೂ ಕೈಲಾಗದವರು, ದುರ್ಬಲರು ಮತ್ತು ಅಸಹಾಯಕರೂ ಅಲ್ಲ. ವೃದ್ಧರು ಆಶ್ರಮ ಸೇರಿಕೊಳ್ಳಿ ಎಂಬ ಜೆನ್‌ಜೀ ಬಾಯಿಂದ ಬಂದಿರುವ ಈ ಮಾತುಗಳು ಲಘು ಮತ್ತು ಬಾಲಿಶ. ನ್ಯಾ. ಸೂರ್ಯಕಾಂತ್ ಆಡಿದ ಮಾತುಗಳ ಬಗ್ಗೆ ಬಿಗಿಧೋರಣೆ ತಾಳಿದ ಜೆನ್‌ಜೀ ಈಗ ದೇಶದ ವೃದ್ದರ ಕುರಿತು ಹೇಳಿರುವ ಮಾತುಗಳು ಸರಿಯೇ ಎಂಬುದೂ ಗಂಭೀರ ಪ್ರಶ್ನೆ.


