ಜಂತರ್ ಮಂತರ್ನಲ್ಲಿ ಪ್ರತಿಭಟನೆಗಳ ಹೆಸರಿನಲ್ಲಿ ಇಡೀ ದೆಹಲಿ ನಗರದ ಜನಜೀವನವನ್ನು ಹಾಳುಗೆಡವಲು ಅವಕಾಶ ನೀಡುವುದು ಸರಿಯಲ್ಲ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ದೇಶದಲ್ಲಿ ನಿರಂತವಾಗಿ ಪ್ರತಿಭಟನೆಗಳು ಮತ್ತು ಧರಣಿಗಳು ನಡೆಯುತ್ತಿರುವುದರ ಬಗ್ಗೆ ದೆಹಲಿ ಹೈಕೋರ್ಟ್ ಆಕ್ಷೇಸಿದೆ. ನ್ಯಾಯಮೂರ್ತಿ ಅಮಿತ್ ಮಹಾಜನ್ ಅವರಿದ್ದ ಏಕಸದಸ್ಯ ಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರಿಗೆ ʼನನ್ನ ಪ್ರಕಾರ, ಇಂತಹ ಪ್ರತಿಭಟನೆಗಳು ನಗರದ ಮಧ್ಯಭಾಗದಲ್ಲಿ ನಡೆಯಲೇ ಬಾರದು. ಪ್ರತಿಭಟನೆಯ ಹೆಸರಿನಲ್ಲಿ ಮುಂಬರುವವರು ಬೇರೆ, ಇಡೀ ನಗರವನ್ನು ವಿನಾಕಾರಣ ಒತ್ತೆಯಾಳಾಗಿ ಇಡುವುದು ಎಷ್ಟು ಸರಿʼ ಎಂದು ಪ್ರಶ್ನಿಸಿದರು.
ಪ್ರತಿಭಟನೆಗಳಿಂದಾಗಿ ಅಂಬುಲೆನ್ಸ್ ಸಂಚಾರ, ಸಾರ್ವಜನಿಕ ಸಾರಿಗೆ, ಮತ್ತು ನಿತ್ಯದ ದೈನಂದಿನ ಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗುತ್ತಿದೆ. ಜಂತರ್ ಮಂತರ್ ಅನ್ನು ಪ್ರತಿಭಟನೆಗೆ ಅವಕಾಶ ಇಲ್ಲದಂತೆ ಬಂದ್ ಮಾಡುವುದೇ ಪರಿಹಾರ. ಜಂತರ್ ಮಂತರ್ ಐತಿಹಾಸಿಕ ಸ್ಮಾರಕವಾಗಿದ್ದು, ಪ್ರತಿಭಟನೆಗಳಿಗೆ ಅವಕಾಶ ನೀಡುವುದು ಸೂಕ್ತವೇ ಎಂಬ ಬಗ್ಗೆ ಸರ್ಕಾರವು ಗಂಭೀರವಾಗಿ ಯೋಚಿಸಬೇಕಾಗಿದೆ ಎಂದು ನ್ಯಾಯಮೂರ್ತಿ ಹೇಳಿದರು.
ಈ ಪ್ರಕರಣವು ‘ಆಲ್ ಇಂಡಿಯಾ ದಲಿತ ಕ್ರಿಶ್ಚಿಯನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ’ ಸಲ್ಲಿಸಿದ ಅರ್ಜಿಯಿಂದ ಹುಟ್ಟಿಕೊಂಡಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಘೋಷ್ , ತಾವು 75 ಜನರೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸಲು ಜುಲೈನಲ್ಲಿ ಅರ್ಜಿ ಸಲ್ಲಿಸಿದ್ದಾಗಿಯೂ, ದೆಹಲಿ ಪೊಲೀಸರು ಅದಕ್ಕೆ ಅನುಮತಿ ನೀಡಿಲ್ಲ, ಇದು ತಮ್ಮ ಸಂವಿಧಾನಬದ್ಧ ಹಕ್ಕಿನ ಉಲ್ಲಂಘನೆ ಎಂದು ವಾದಿಸಿದರು.
ಶಾಹೀನ್ ಬಾಗ್ ಪ್ರಕರಣದ ತೀರ್ಪನ್ನು ಉಲ್ಲೇಖಿಸಿ, ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು. ಪ್ರತಿಕ್ರಿಯಿಸಿದ ಎಎಸ್ಜಿ ಚೇತನ್ ಶರ್ಮಾ , ಪ್ರಸ್ತುತ ಜಂತರ್ ಮಂತರ್ ಪ್ರದೇಶದಲ್ಲಿ ಸಿಆರ್ಪಿಸಿ ಸೆಕ್ಷನ್ 144 ಜಾರಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು. ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ ಸುರಕ್ಷತಾ ಕಾರಣಗಳಿಗಾಗಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. 75 ಜನರು ಎಂದು ಅರ್ಜಿ ಸಲ್ಲಿಸಿದರೂಗಿ 75 ಸಾವಿರ ಜನರು ಸೇರುವ ಸಾಧ್ಯತೆ ತಳ್ಳಿಹಾಕಲಾಗುವುದಿಲ್ಲ. ಆಗ ಪರಿಸ್ಥಿತಿ ನಿಭಾಯಿಸುವುದು ಬಹಳ ಕಷ್ಟಕರ. ಜಂತರ್ ಮಂತರ್ ಪ್ರತಿಭಟನಾ ಸ್ಥಳವಾಗಿ ಮುಂದುವರಿಯಬೇಕೇ ಅಥವಾ ಬೇಡವೇ ಎಂಬ ವಿಚಾರವು ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬಂದಿರುವುದಾಗಿ ತಿಳಿಸಿದರು.
ಎರಡೂ ಕಡೆಯ ವಾದಗಳನ್ನು ಪರಿಗಣಿಸಿದ ದೆಹಲಿ ಹೈಕೋರ್ಟ್, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಆಗಸ್ಟ್ 8ರೊಳಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತು. ಅರ್ಜಿಯನ್ನು ವಿಲೇವಾರಿಗೊಳಿಸಿದ ನ್ಯಾಯಾಲಯವು, ಅರ್ಜಿದಾರರು ತಾವು ಅರ್ಜಿಯಲ್ಲಿ ನಮೂದಿಸಿರುವ ಸಂಖ್ಯೆಗಿಂತ ಹೆಚ್ಚು ಜನರನ್ನು ಸೇರಿಸುವಂತಿಲ್ಲ ಎಂದೂ ಸ್ಪಷ್ಟಪಡಿಸಿತು.
ದೆಹಲಿಯಲ್ಲಿ ಪ್ರತಿಭಟನೆಗಳನ್ನು ನಿಯಂತ್ರಿಸಲು ಹೊಸ ನಿಯಮಗಳು ರೂಪುಗೊಳ್ಳುವ ಸಾಧ್ಯತೆಗಳಿವೆ. ಇದು ಪ್ರತಿಭಟನಾಕಾರರ ಹಕ್ಕನ್ನು ಸಂರಕ್ಷಿಸುವ ಜೊತೆಗೆ ನಗರದ ಸುವ್ಯವಸ್ಥೆಯನ್ನೂ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿ ಪರಿಣಮಿಸಲಿದೆ.


