ರಾಜ್ಯದಲ್ಲಿ ಬಿಜೆಪಿಗೆ ಜೆಡಿಎಸ್ ಸಖ್ಯ ಅನಿವಾರ್ಯವೇ ? ಸದ್ಯದ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ ಇದು ಮಹತ್ವ ಪಡೆದುಕೊಳ್ಳುವುದು ಸಜ. ಮಾಜಿ ಪ್ರಧಾನಿ ದೇವೇಗೌಡರನ್ನು ರಾಜ್ಯಸಭೆಗೆ ಕಳುಹಿಸಲು ಬಿಜೆಪಿ ತಾತ್ವಿಕವಾಗಿ ಒಪ್ಪಿದಲ್ಲಿ ಡಿ ವಿ ಸದಾನಂದಗೌಡ ಅವರನ್ನು ಬಿಜೆಪಿ ತನ್ನ ಹುರಿಯಾಳು ಆಗಿ ಪರಿಗಣಿಸುವುದು ಅನುಮಾನ. ಆದರೆ ದೇವೇಗೌಡರನ್ನು ಇಲ್ಲಿಂದ ರಾಜ್ಯಸಭೆಗೆ ಬಿಜೆಪಿ ಮೂಲಕ ಚುನಾಯಿಸಿ ಕಳುಹಿಸುವುದು ಬಹುತೇಕ ರಾಜ್ಯ ಬಿಜೆಪಿ ನಾಯಕರಿಗೆ ಒಂದರ್ಥದಲ್ಲಿ ನುಂಗಲಾರದ ಬಿಸಿತುಪ್ಪವಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ನಿತಿನ್ ನಬೀನ್ ಭಾನುವಾರದಂದು ಪಕ್ಷದ ಪ್ರಧಾನ ಕಚೇರಿಯಲ್ಲಿ ರಾಜ್ಯದ ಪ್ರಮುಖ ಮುಖಂಡರಿಗೆ ನೀಡಿದ ಸಂದೇಶವಂತೂ ಸ್ಪಷ್ಟ. ರಾಜ್ಯದ ಬಿಜೆಪಿ ಪಾಳೆಯದಲ್ಲಿ ಎಲ್ಲವೂ ಸರಿಯಿಲ್ಲ. ಮುಂದಿನ ಅಸೆಂಬ್ಲಿ ಚುನಾವಣೆಯಲ್ಲಿ ನಾವು ಗೆದ್ದೇ ಬಿಟ್ಡೆವು ಎಂದು ಬೀಗುತ್ತಿರುವ ನಾಯಕರಿಗೂ ನಿತಿನ್ ನೇರ ಎಚ್ಚರಿಕೆ ನೀಡಿರುವುದು ಗಮನಾರ್ಹ. ಪಕ್ಷದ ಸಂಘಟನೆ ವಿಷಯದಲ್ಲಿ ದಿಲ್ಲಿ ಬಿಜೆಪಿ ನಾಯಕರು ರಾಜ್ಯದ ನಾಯಕರ ಸಾಮರ್ಥ್ಯ ಮತ್ತು ಕಾರ್ಯ ನಿರ್ವಹಣೆ ಬಗ್ಗೆ ಸಂಪೂರ್ಣ ವಿಶ್ವಾಸವನ್ನು ಹೊಂದಿಲ್ಲ. ಮಿಗಿಲಾಗಿ ಬಿಜೆಪಿ ತನ್ನ ಸ್ವಂತ ಶಕ್ತಿಯ ಮೇಲೆ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುವ ವಿಶ್ವಾಸವನ್ನು ಹೊಂದಿಲ್ಲ . ಈ ದಿಸೆಯಲ್ಲಿ ದಿಲ್ಲಿ ಬಿಜೆಪಿ ದಿಗ್ಗಜರು ಕೈಗೊಳ್ಳುವ ಎಲ್ಲ ತೀರ್ಮಾನಗಳೂ ಈಗ ದೇವೇಗೌಡರು ಮತ್ತು ಜೆಡಿಎಸ್ ಪಕ್ಷಕ್ಕೆ ವರದಾಯಕವಾಗಿರುವುದು ಸತ್ಯಕ್ಕೆ ದೂರವಾದ ಸಂಗತಿಯಲ್ಲ. ಕುಮಾರಸ್ವಾಮಿ, ಎನ್‌ಡಿಎ ಜೊತೆಗೂಡಿ ಕೆಲಸ ಮಾಡಲು ಜೆಡಿಎಸ್ ಸಿದ್ದ ಎಂದಿರುವುದು ಗಮನಾರ್ಹ. ಅದರೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಾಧಿಸಿದ ಬಳಿಕ ಆದ ಎರಡೂ ಪಕ್ಷಗಳ ರಾಜಕೀಯ ಶಕ್ತಿ ದುರ್ಬಲಗೊಂಡಿತೇ ಅಥವಾ ಬಲವರ್ಧನೆ ಆಯಿತೇ ಎಂಬುದು ಗಂಭೀರ ಪ್ರಶ್ನೆ.
ನರೇಂದ್ರ ಮೋದಿ ಮತ್ತು ಅಮಿತ್‌ಷಾ ಅದೆಷ್ಟೇ ಕರ್ನಾಟಕವನ್ನು ಬಿಜೆಪಿ ಭದ್ರಕೋಟೆಯಾಗಿಸಲು ಪ್ರಯತ್ನಿಸಿದರೂ ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಎಇಎಸ್ ಹೊಂದಿರುವ ರಾಜಕೀಯ ಪ್ರಾಬಲ್ಯವನ್ನು ತನ್ನ ಕೈವಶವಾಗಿಸಿಕೊಳ್ಳಲು ಸಾದ್ಯವಾಗಿಲ್ಲ.
ಕರ್ನಾಟಕದಲ್ಲಿ ಬಿಜೆಪಿ ಪ್ರಬಲವಾಗಬೇಕಾದರೆ ಜೆಡಿಎಸ್ ಭದ್ರಕೋಟೆಗಳನ್ನು ಬಿಜೆಪಿ ಸೀಳಬೇಕಲ್ಲವೇ ? ಆದರೆ ಈಗಿನ ರಾಜಕೀಯ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಿಜೆಪಿ ಒಂದಷ್ಟು ರಾಜತಾಂತ್ರಿಕ ಜಾಣ ನಡೆ ಅನುಸರಿಸುತ್ತಿರುವುದನ್ನು ಸ್ಪಷ್ಡವಾಗಿ ಕಾಣಬಹುದು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿ ಅಧಿಕಾರ ನಡೆಸಿದ್ದುಂಟು. ಆದರೆ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ೧೩೬ ಸೀಟುಗಳನ್ನು ಗಳಿಸಿ ಅಧಿಕಾರವನ್ನು ನಡೆಸುವ ಅಚಲ ವಿಶ್ವಾಸವನ್ನು ಹೊಂದಿದೆಯೇ ಎಂಬುದು ಗಂಭೀರ ಪ್ರಶ್ನೆ. ಒಟ್ಟಿನಲ್ಲಿ ರಾಜ್ಯದ ಬಿಜೆಪಿ ಪಾಳೆಯದಲ್ಲಿ ತಲೆದೋರಿರುವ ಆಂತರಿಕ ಗೊಂದಲ ಮತ್ತು ಭಿನ್ನಮತ ಶಮನವಾಗದಿರುವುದು ಒಂದರ್ಥದಲ್ಲಿ ಎನ್‌ಡಿಎ ಮಿತ್ರಕೂಟವಾದ ಜೆಡಿಎಸ್‌ಗೆ ವರವೇ ಆಗಿದೆ.


