ಬೆಂಗಳೂರಿನ ಕುಂಬಳಗೋಡು ಬಳಿ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಬೆಡ್ಶೀಟ್ನಲ್ಲಿ ಮುಚ್ಚಿಟ್ಟು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಧೀರಜ್ ಕುಮಾರ್ (24)ನನ್ನು ಬಿಹಾರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಂಬಳಗೋಡು ಗೇರುಪಾಳ್ಯದಲ್ಲಿ ಜುಲೈ 27ರಂದು ಪತ್ನಿ ರೀಮಾ ಕುಮಾರಿಯನ್ನು ಕೊಲೆ ಮಾಡಿ ಧೀರಜ್ ಬಿಹಾರಕ್ಕೆ ತೆರಳಿ ತಲೆಮರೆಸಿಕೊಂಡಿದ್ದ. ಕೆಲವು ದಿನಗಳ ನಂತರ ರೀಮಾ ಸ್ನೇಹಿತೆಯು ಆಕೆಗೆ ಕರೆ ಮಾಡಿದರೂ ರಿಸೀವ್ ಆಗಿರಲಿಲ್ಲ. ಮನೆಗೆ ಹೋಗಿ ನೋಡಿದಾಗ ದುರ್ವಾಸನೆ ಬರುತ್ತಿರುವುದು ಗೊತ್ತಾಗಿದೆ. ಗೆ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ರೀಮಾ ಕುಮಾರಿ ಶವ ಪತ್ತೆಯಾಗಿತ್ತು.
ಕಳೆದ ಡಿಸೆಂಬರ್ನಲ್ಲಿ ಕೆಲಸ ಅರಸಿ ಧೀರಜ್ ಮತ್ತು ರೀಮಾ ಬೆಂಗಳೂರಿಗೆ ಬಂದಿದ್ದರು. ಪರಸ್ಪರ ಪ್ರೀತಿಸಿ, ಮನೆಯವರಿಗೆ ತಿಳಿಸದೆ ಮದುವೆಯಾಗಿದ್ದರು. ಗೇರುಪಾಳ್ಯದ ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ದಂಪತಿ ಆಗಾಗ ಜಗಳವಾಡುತ್ತಿದ್ದರು, ಮನಸ್ತಾಪ ಹೆಚ್ಚಾಗಿತ್ತು. ಬೆಂಗಳೂರಿಗೆ ಬಂದ ಬಳಿಕ ರೀಮಾ ಪತಿಯ ಮೇಲೆ ಆಸಕ್ತಿ ಕಳೆದುಕೊಂಡಿದ್ದಳು. ಮನೆಯಲ್ಲಿ ಹೆಚ್ಚು ಸಮಯ ರೀಲ್ಸ್ ಮಾಡುತ್ತಾ ಇರುತ್ತಿದ್ದಳು. ಸೆಕ್ಸ್ಗೂ ನಿರಾಕರಿಸುತ್ತಿದ್ದಳು ಎನ್ನಲಾಗಿದೆ.
ತನಗೆ ಬೇಕಾದಷ್ಟು ಮಾತ್ರ ಅಡುಗೆ ಮಾಡಿಕೊಂಡು ತಿನ್ನುತ್ತಿದ್ದಳು. ತನಗೆ ಊಟ ಹಾಕುತ್ತಿರಲಿಲ್ಲ ಎಂಬುದೂ ಜಗಳಕ್ಕೆ ಕಾರಣವಾಗಿತ್ತು ಎಂದು ಆರೋಪಿ ಹೇಳಿದ್ದಾನೆ. ತಾನು ಬಿಹಾರಕ್ಕೆ ವಾಪಸ್ ಹೋಗಬೇಕು ಎಂದು ಆಕೆ ಪಟ್ಟು ಹಿಡಿದಿದ್ದಳು ಎನ್ನಲಾಗಿದೆ. ಕೊಲೆ ನಡೆದ ದಿನ ಧೀರಜ್ ಮನೆಗೆ ಬಂದಾಗ ಊಟ ಇರಲಿಲ್ಲ. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಗಿದೆ. ರೀಮಾ ಮೊದಲು ದೊಣ್ಣೆಯಿಂದ ಧೀರಜ್ಗೆ ಹೊಡೆದಿದ್ದಳು. ಸಿಟ್ಟಿಗೆದ್ದ ಧೀರಜ್ ವೇಲ್ನಿಂದ ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಖಕ್ಕೆ ಪ್ಲಾಸ್ಟಿಕ್ ಪೇಪರ್ ಸುತ್ತಿ, ಶವವನ್ನು ಬೆಡ್ಶೀಟ್ನಲ್ಲಿ ಸುತ್ತಿ ಪರಾರಿಯಾಗಿದ್ದ, ಬಿಹಾರದಲ್ಲಿ ಬಂಧಿಸಿದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


