ಪತ್ನಿಯ ಹುಟ್ಟುಹಬ್ಬ ಆಚರಿಸಿದ ಬಳಿಕ ಆಕೆಯ ಕೊಲೆ ಮಾಡಿದ್ದ ಪೊಲೀಸ್ ಕಾನ್ಸ್ಟೇಬಲ್ ದೆಹಲಿಯ ಮಯೂರ್ ವಿಹಾರ್-ನೋಯ್ಡಾ ಲಿಂಕ್ ರಸ್ತೆಯ ಹೋಟೆಲ್ನ ಹಿಂಭಾಗ ಪಾರ್ಕಿಂಗ್ ಪ್ರದೇಶದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪೊಲೀಸ್ ಕಾನ್ಸ್ಟೇಬಲ್ಮನೀಶ್ ಭಾಟಿ ಭಾನುವಾರ ರಾತ್ರಿ ಪತ್ನಿ ಪ್ರಿಯಾಂಕಾ ಅವರೊಂದಿಗೆ ಹುಟ್ಟುಹಬ್ಬ ಆಚರಿಸಲು ಮನೆಯಿಂದ ಹೊರಟಿದ್ದರು. ಪ್ರಯಾಣದ ವೇಳೆ ದಂಪತಿ ಜಗಳವಾಡಿದ್ದಾರೆ. ಜಗಳ ತೀವ್ರಗೊಂಡು ಭಾಟಿ ಲಾಲ್ ಬಹದ್ದೂರ್ ಶಾಸ್ತ್ರಿ ಆಸ್ಪತ್ರೆಯ ಬಳಿ ಸ್ಕೂಟರ್ ನಿಲ್ಲಿಸಿ ಪ್ರಿಯಾಂಕಾ ಮೇಲೆ ಎರಡು ಬಾರಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಸ್ಥಳೀಯರು ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ವೈದ್ಯರು ಆಕೆ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಪ್ರಿಯಾಂಕಾ ಕುಟುಂಬವು ಭಾಟಿ ಮತ್ತು ಸಂಬಂಧಿಕರ ಮೇಲೆ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದೆ. ಮದುವೆಯಲ್ಲಿ 15 ಲಕ್ಷ ನಗದು ಸೇರಿದಂತೆ ಹೆಚ್ಚಿನ ವರದಕ್ಷಿಣೆ ಪಡೆದಿದ್ದರೂ, ಮನೀಶ್ ಭಾಟಿ ಮತ್ತು ಕುಟುಂಬ ಐಷಾರಾಮಿ ಕಾರಿಗೆ ಬೇಡಿಕೆ ಇಡುತ್ತಿತ್ತು ಎಂದು ಆಕೆಯ ತಂದೆ ತಂದೆ ಅಜಿತ್ ಸಿಂಗ್ ಆರೋಪಿಸಿದ್ದಾರೆ. ಐಷಾರಾಮಿ ಕಾರಿನ ಬೇಡಿಕೆಯನ್ನು ನಾವು ಪೂರೈಸಲು ಸಾಧ್ಯವಾಗದ ಕಾರಣ ಮಗಳಿಗೆ ಕಿರುಕುಳ ನೀಡುತ್ತಲೇ ಇದ್ದರು ಎಂದು ಅಜಿತ್ ಸಿಂಗ್ ತಿಳಿಸಿದ್ದಾರೆ.
2022 ರ ಬ್ಯಾಚ್ನ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ಮನೀಶ್ ಭಾಟಿ, ಆಟೋ ಕಳ್ಳತನ ವಿರೋಧಿ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಪತ್ನಿಯ ಕೊಲೆ ಬಳಿಕ ಪರಾರಿಯಾಗಿದ್ದರು. ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳು ಕಾರ್ಯಾಚರಿಸಿದ್ದವು. ಮಂಗಳವಾರ ಸಂಜೆ ಮಯೂರ್ ವಿಹಾರ್-ನೋಯ್ಡಾ ಲಿಂಕ್ ರಸ್ತೆಯ ಬಳಿಯ ಹೋಟೆಲ್ನ ಹಿಂಭಾಗದಲ್ಲಿರುವ ಪಾರ್ಕಿಂಗ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮಾಹಿತಿ ಸಿಕ್ಕಿತ್ತು. ಪೊಲೀಸರು ಸ್ಥಳಕ್ಕೆ ಹೋಗಿ ಮೃತ ವ್ಯಕ್ತಿಯನ್ನು ಮನೀಶ್ ಎಂದು ಗುರುತಿಸಿದೆ. ಸೇವಾ ರಿವಾಲ್ವರ್ ಮೃತದೇಹದ ಪಕ್ಕದಲ್ಲಿ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಭಾಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಘಟನಾ ಸ್ಥಳವನ್ನು ಪರಿಶೀಲಿಸಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.


