Menu

ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದ: ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು ಎಂದ ಸಿಎಂ

ಆಸ್ತಿ ಮಾಲೀಕರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದ್ದು, ಆಸ್ತಿಯ ಸಂಪೂರ್ಣ ಹಕ್ಕು ಮಾಲೀಕರಿಗಿರಬೇಕು.  ಆಸ್ತಿ ಕೊಳ್ಳುವಾಗ ಅದರ ಸಾಧಕ ಬಾಧಕಗಳನ್ನು ಮಾಲೀಕರೇ ನೋಡಿಕೊಳ್ಳುವಂತಾಗಬೇಕು. ಮಾಲೀಕರಾದ ಮೇಲೆ ಒಪ್ಪಂದ, ನೋಂದಣಿ, ಒಳಗೆ ಹೋದ ನಂತರ ಬೇರೆ ಬೇರೆ ರೀತಿಯಲ್ಲಿ ತಲೆದೋರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ ಎಂದು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) 2026 ಕುರಿತು ಅಪಾರ್ಟ್ ಮೆಂಟ್ ಸಂಘಗಳ ಪ್ರತಿನಿಧಿಗಳೊಂದಿಗೆ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.  ಆಸ್ತಿ ಕೊಳ್ಳುವಾಗ ಅದರ ಸಾಧಕ ಬಾಧಕಗಳನ್ನು ಮಾಲೀಕರೇ ನೋಡಿಕೊಳ್ಳುವಂತಾಗಬೇಕು. ಮಾಲೀಕರಾದ ಮೇಲೆ ಒಪ್ಪಂದ, ನೋಂದಣಿ, ಒಳಗೆ ಹೋದ ನಂತರ ಬೇರೆ ಬೇರೆ ರೀತಿಯಲ್ಲಿ ತಲೆದೋರುವ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಅರಿವಿದೆ. ಜನರಿಗೆ ಸಹಾಯ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ಜನರು ಕಷ್ಟಪಟ್ಟು ತಲೆಯ ಮೇಲೆ ಸೂರು ಕಟ್ಟಿಕೊಂಡಿದ್ದಾರೆ. ಅದು ಸುಲಭದ ಮಾತಲ್ಲ ಎಂದರು.

ಕಷ್ಟ ಪಟ್ಟು ಗಳಿಸಿರುವ ಆಸ್ತಿಯನ್ನು ಮಾಲೀಕರು ಸರಿಯಾಗಿ ಅನುಭವಿಸಬೇಕೆನ್ನುವುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ರಾಜ್ಯದಲ್ಲಿ ಇ ಖಾತಾ ವನ್ನು ಮನೆ ಬಾಗಿಲಿಗೆ ಕೊಡುವ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಕ್ರಾಂತಿಯನ್ನೇ ಉಂಟುಮಾಡಿದೆ ಎಂದರು. ಬೆಂಗಳೂರಿನ 40 ಲಕ್ಷ ಆಸ್ತಿಗಳಲ್ಲಿ 26 ಲಕ್ಷ ಆಸ್ತಿಗಳಿಗೆ ಇ ಖಾತಾ ಮಾಡಿಕೊಡಲಾಗಿದೆ. ಇಡೀ ದೇಶದಲ್ಲಿ ಇಂಥ ಮತ್ತೊಂದು ವ್ಯವಸ್ಥೆ ಇಲ್ಲ ಎಂದು ಹೇಳಿದರು.

ಅಪಾರ್ಟ್ ಮೆಂಟ್ ಗಲ್ಲಿ STP, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲು ಸರ್ಕಾರ ಸುಧಾರಣೆಗಳನ್ನು ತಂದಿದೆ. ಅಂತರ್ಜಲ ವೃದ್ಧಿ, ಕಾವೇರಿ 5 ನೇ ಹಂತಗಳ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೆಲವು ಡೆವೆಲಪರ್ ಗಳು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಅವರೊಂದಿಗೂ ಮಾತನಾಡಿ ದಾಖಲಾತಿಗಳ ವರ್ಗಾವಣೆ ಸರಾಗವಾಗಿ ಆಗಬೇಕೆಂದು ಸೂಚಿಸಲಾಗುವುದು. ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದರು.

ಆಗಸ್ಟ್ 6 ರವರೆಗೆ ಸಮಯಾವಕಾಶವಿದ್ದು, ಅಭಿಪ್ರಾಯಗಳನ್ನು, ಸಲಹೆಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಬರೆಯಬಹುದು. ಆಸ್ತಿ ಕೊಂಡವರಿಗೆ ಅನುಕೂಲವಾಗುವಂತೆ ಈ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ ಎಂದದು ತಿಳಿಸಿದರು.

ಈಸ್ ಆಫ್ ಬಿಸಿನೆಸ್ ಗಾಗಿ ನಗರದಲ್ಲಿ ಐದು ಕಾರ್ಪೊರೇಷನ್ ಗಳನ್ನು ರಚಿಸಲಾಗಿದ್ದು, ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ ಬಳಿ, ಅಕ್ಕಪಕ್ಕದ ಅಪಾರ್ಟ್ ಮೆಂಟ್ ಗಳ ಸಮಸ್ಯೆಗಳನ್ನೂ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಾಗಿದೆ. ಅಧಿಕಾರ ವಿಕೇಂದ್ರೀಕರಣ ನಮ್ಮ ಸರ್ಕಾರದ ಉದ್ದೇಶ. ವ್ಯಾಜ್ಯಗಳಿಗೆ ಹೋಗದೆ ಬಗೆಹರಿಸಿಕೊಳ್ಳಲು ಒತ್ತು ನೀಡಲಾಗುತ್ತಿದೆ.  ಜನರ ಧ್ವನಿಯೇ ಸರ್ಕಾರದ ಧ್ವನಿಯಾಗಬೇಕು. ಟೀಂ ಕರ್ನಾಟಕವಾಗಿ ನಾವೆಲ್ಲ ಕೆಲಸ ಮಾಡಬೇಕೆಂದು ಸಿಎಂ ಕರೆ ನೀಡಿದರು.

ಬೆಂಗಳೂರಿನಲ್ಲಿ ಬಹಳ ವರ್ಷಗಳಿಂದ ಅಸ್ತಿತ್ವದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ,  ನಗರದಲ್ಲಿ 1.35 ಕೋಟಿ ವಾಹನಗಳಿದ್ದು , ಗುಂಡಿಗಳನ್ನು ಮುಚ್ಚಲೆಂದೇ 4000 ಕೋಟಿ ವೆಚ್ಚ ಮಾಡಲಾಗಿದೆ. ಬಡವರೂ ಕೂಡ ಮನೆ ಕಟ್ಟಲು ಅಗತ್ಯ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ.  ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ದಾಖಲಾತಿಗಳನ್ನು ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ನಗರದಲ್ಲಿ ಹೈ ರೈಸ್ ಕಟ್ಟಡಗಳ ಬಗ್ಗೆ ಗಮನಹರಿಸಿ, ರಸ್ತೆಗಳನ್ನು ವಿಸ್ತರಿಸುವ ಬಗ್ಗೆ ಒತ್ತು ನೀಡಲಾಗುತ್ತಿದೆ . ನಗರದಲ್ಲಿ 132 ಕಿಮೀ ಪೆರಿಫೆರಲ್ ವರ್ತುಲ ರಸ್ತೆ,( ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ) ನಿರ್ಮಾಣವಾಗುತ್ತಿದೆ ಎಂದರು. ದೇಶದ ವಿವಿಧ ರಾಜ್ಯಗಳಿಗೆ ಹೋಲಿಸಿದರೆ ಭೂ ಸ್ವಾಧೀನಕ್ಕೆ ರಾಜ್ಯದಲ್ಲಿ ರೈತರಿಗೆ ಗರಿಷ್ಠ ಮೊತ್ತದ ಪರಿಹಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

ಯಾವುದೇ ಕಟ್ಟಡ ಕಾನೂನುಬದ್ಧವಾಗಿ ನಿರ್ಮಾಣವಾಗಬೇಕು. ಭೂಮಿಯ ಬೆಲೆ ಕಡಿಮೆಯಾಗಬೇಕೆನ್ನುವುದು ನಮ್ಮ ಆಶಯ. ಮುಂಬೈ ನಲ್ಲಿ ಕಟ್ಟಡಗಳ ಬೆಲೆ ಹೆಚ್ಚಿದ್ದು, ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಕಟ್ಟಡಗಳನ್ನು ಕೊಳ್ಳಬಹುದಾಗಿದೆ. ಅದಕ್ಕಾಗಿಯೇ ವಿಶ್ವದ ನಾಯಕರು ಬೆಂಗಳೂರಿನತ್ತ ನೋಡುತ್ತಿದ್ದಾರೆ. ಅಪಾರ್ಟ್ ಮೆಂಟ್ ಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯ ಮಾಡುವ ಬಗ್ಗೆ ಸರ್ಕಾರ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಸಿಎಂ ಸಂವಾದದಲ್ಲಿ ಭಾಗಿಯಾಗಿದ್ದ ಅಪಾರ್ಟ್ ಮೆಂಟ್ ಮಾಲೀಕರ ಪ್ರಶ್ನೆಗೆ ಉತ್ತರಿಸಿದರು.

ದಾವೋಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಲ್ಲಾ ಹೂಡಿಕೆದಾರರು ಬೆಂಗಳೂರು ನಗರದಲ್ಲಿ ಹೂಡಿಕೆ ಮಾಡಲು ಆಸಕ್ತಿ ವ್ಯಕ್ತಪಡಿಸಿದ ಬಗ್ಗೆ ತಿಳಿಸಿದ ಮುಖ್ಯಮಂತ್ರಿಗಳು ಮುಂಬೈ ಹಾಗೂ ಇತರ ನಗರಗಳಲ್ಲಿ ಹೂಡಿಕೆ ಮಾಡುವುದು ದುಬಾರಿಯಾಗಿರುವುದರಿಂದ ವಿದೇಶಿ ಹೂಡಿಕೆದಾರರು ಬೆಂಗಳೂರಿನತ್ತ ಆಕರ್ಷಿತರಾಗಿದ್ದರು ಎಂದರು. ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವೂ ಬರಲಿರುವುದರಿಂದ ಬೆಂಗಳೂರು ಹೂಡಿಕೆದಾರರಿಗೆ ಕೇಂದ್ರವಾಗಿದೆ ಎಂದರು.

ಸಚಿವರಾದ ಕೃಷ್ಣ ಬೈರೇಗೌಡ, ಬೈರತಿ ಸುರೇಶ್, ಕೆ.ಜೆ.ಜಾರ್ಜ್ , ಬಿಡಿಎ ಅಧ್ಯಕ್ಷ ಎನ್. ಎ .ಹ್ಯಾರಿಸ್, ಅಪಾರ್ಟ್ ಮೆಂಟ್ ಸಂಘಗಳ ಅಧ್ಯಕ್ಷ ರಾಜೀವ್ ಗೌಡ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *