ಲಂಚಗುಳಿತನ, ಆಡಳಿತದಲ್ಲಿ ಅಡಿಗಡಿಗೂ ತಾಂಡವವಾಡಿದ ಅಪ್ರಮಾಣಿಕತೆ, ಭ್ರಷ್ಟತೆ, ಸ್ವಜನಪಕ್ಷಪಾತ, ಧರ್ಮ ಪ್ರಚೋದನೆ, ಜಾತಿ ನಿಂದನೆ, ತಾರತಮ್ಯ ಇವೇ ಇಂದಿನ ಪ್ರಜಾತಂತ್ರದ ಮಹಾಪೀಡೆಗಳು. ಇದರಿಂದ ಸಂಪೂರ್ಣವಾಗಿ ಮುಕ್ತವಾಗಿ ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬುದು ಧ್ಯೇಯ ವಾಕ್ಯ. ಆದರೆ ಸ್ವತಂತ್ರ ಭಾರತದಲ್ಲಿ ಮತ್ತು ಒಕ್ಕೂಟದ ಗಣತಂತ್ರದ ವ್ಯವಸ್ಥೆಯಲ್ಲಿ ಮೇಲಿನ ಎಲ್ಲ ಸದಾಶಯಗಳು ಮರೀಚಿಕೆಯಾಗಿಯೇ ಉಳಿದಿವೆ.
ಜಿರಳೆ ಸಾಮಾನ್ಯ ಕ್ರಿಮಿ. ಇದರಲ್ಲಿ ಅನುಮಾನವಿಲ್ಲ. ಪ್ರಪಂಚದಲ್ಲಿಂದು ಜಿರಳೆ ಇಲ್ಲದ ಜಾಗ ಎಲ್ಲಿದೆ ? ಇದು ಕೂಡಾ ಒಂದು ವೈಜ್ಞಾನಿಕ ಕುತೂಹಲ. ಅದೇನೆ ಇರಲಿ. ಈಗ ದೇಶದಲ್ಲಿ ಜಿರಳೆ ಎಂಬ ಪದ ವ್ಯಾಪಕ ಸುದ್ದಿಯಲ್ಲಿದೆ ಮತ್ತು ಇದರ ಅಸ್ತಿತ್ವ ಮತ್ತು ವ್ಯಾಖ್ಯಾನಗಳು ಚರ್ಚೆಗೆ ಗ್ರಾಸವಾಗಿದೆ.
ಇಂದಿನ ಡಿಜಿಟಲ್ ಮತ್ತು ಇಂಟರ್‌ನೆಟ್‌ನ ಶರವೇಗದ ಯುಗದಲ್ಲಿ ಯುವ ಸಮೂಹವನ್ನು ಕಡೆಗಣಿಸುವಂತಿಲ್ಲ. ಎಲ್ಲ ಸಂಪ್ರದಾಯ ಮತ್ತು ಹಳೆಯ ಶೈಲಿಯ ಪದ್ದತಿಗಳನ್ನು ಅತಿವೇಗವಾಗಿ ಧಿಕ್ಕರಿಸುವ ಪ್ರವೃತ್ತಿಯುಳ್ಳ ಬಿಸಿರಕ್ತದ ಮಹಾಸಮುದಾಯವಿದು. ಅದರಲ್ಲಿಯೂ ಮುಖ್ಯವಾಗಿ ಭಾರತದಂತಹ ಬೃಹತ್ ದೇಶದಲ್ಲಿ ಇದು ಯಾವ ರೀತಿಯಲ್ಲಿ ಮತ್ತು ಯಾವ ಪ್ರಮಾಣದಲ್ಲಿ ಹರಡುವುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಎಲ್ಲ ರಂಗದಲ್ಲಿ ಬದಲಾವಣೆ ಬೇಕೆಂದು ಆಶಿಸುವ ಯುವ ಸಮೂಹಕ್ಕೆ ದೀರ್ಘಾಲೋಚನೆಗಳು ಮತ್ತು ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಸಂಪೂಣ ಅವಗಾಹನೆ ಇಲ್ಲದಿರಬಹುದು. ಆದರೆ ಕ್ರಿಪ್ರಗತಿಯಲ್ಲಿ ಬದಲಾವಣೆ ಆಗಬೇಕೆಂಬ ಬಯಕೆಯ ಪ್ರಮಾಣ ಈ ಸಮೂಹದಲ್ಲಿ ಅತಿಯಾಗಿರುವುದೆಂಬುದರಲ್ಲಿ ಅನುಮಾನವಿಲ್ಲ.
ಶತಮಾನಗಳ ಹಿಂದೆ ಇಂತಹ ಕ್ರಾಂತಿಕಾರಕ ಮನೋಭಾವನೆಗಳಿದ್ದವರು ಸಂಘಟನೆಯಾಗಲು ಹಲವು ಹತ್ತು ಸಮಸ್ಯೆಗಳಿದ್ದವು ಎಂಬುದು ನಿಜ. ಆದರೆ ಇಂದು ಕೇವಲ ಒಂದು ಇಂಟರ್‌ನೆಟ್ ಮತ್ತು ನೆಟ್‌ವರ್ಕ್ ವ್ಯವಸ್ಥೆಯಿಂದ ಕ್ರಾಂತಿಕಾರಕ ಮನೋಭಾವನೆ ಗಾಳಿಯಷ್ಟೆ ವೇಗದಲ್ಲಿ ಜನತೆಗೆ ತಲುಪಲು ಸಾಧ್ಯ.
ಹೌದು. ದೇಶದ ಯುವಜನತೆ ಮತ್ತು ಜನತೆಯಿಂದು ಜಡ್ಡುಗಟ್ಟಿದ ರಾಜಕೀಯ ವ್ಯವಸ್ಥೆಯಲ್ಲಿ ಸಿಲುಕಿದ್ದಾರೆ. ಈ ಕೊಳಕು ಮತ್ತು ಮಾಲಿನ್ಯದಿಂದ ಹೊರಬರಲು ಇವರಿಗೆ ಸಾಧ್ಯವಾಗಿಲ್ಲ. ಯಾವುದಾದರೂ ಒಂದು ವ್ಯವಸ್ಥೆ ಬದಲಾಗಬೇಕಾದರೆ ಅದು ಬಿಸಿರಕ್ತದ ಯುವಸಮೂಹದಿಂದಲೇ ಮೊದಲಾಗಬೇಕಲ್ಲವೇ ? ಸಮಾಜ ಮತ್ತು ಸರ್ಕಾರಗಳ ವಿರುದ್ದ ಬಂಡೇಳುವ ಪ್ರವೃತ್ತಿಯುಳ್ಳವರು ಇಂದು ಡಿಜಿಟಲ್ ಮತ್ತು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರಂ ಅನ್ನು ಪರಿಣಾಮಕಾರಿಯಾಗಿ ಬಳಸಲು ಮುಂದಾಗಿರುವುದು ಗಮನಾರ್ಹ.
ಲಂಚಗುಳಿತನ, ಆಡಳಿತದಲ್ಲಿ ಅಡಿಗಡಿಗೂ ತಾಂಡವವಾಡಿದ ಅಪ್ರಮಾಣಿಕತೆ, ಭ್ರಷ್ಟತೆ, ಸ್ವಜನಪಕ್ಷಪಾತ, ಧರ್ಮ ಪ್ರಚೋದನೆ, ಜಾತಿ ನಿಂದನೆ, ತಾರತಮ್ಯ ಇವೇ ಇಂದಿನ ಪ್ರಜಾತಂತ್ರದ ಮಹಾಪೀಡೆಗಳು. ಇದರಿಂದ ಸಂಪೂರ್ಣವಾಗಿ ಮುಕ್ತವಾಗಿ ಸರ್ವರಿಗೂ ಸಮಪಾಲು ಮತ್ತು ಸರ್ವರಿಗೂ ಸಮಬಾಳು ಎಂಬುದು ಧ್ಯೇಯ ವಾಕ್ಯ. ಆದರೆ ಸ್ವತಂತ್ರ ಭಾರತದಲ್ಲಿ ಮತ್ತು ಒಕ್ಕೂಟದ ಗಣತಂತ್ರದ ವ್ಯವಸ್ಥೆಯಲ್ಲಿ ಮೇಲಿನ ಎಲ್ಲ ಸದಾಶಯಗಳು ಮರೀಚಿಕೆಯಾಗಿಯೇ ಉಳಿದಿವೆ.
ಚುನಾವಣೆ ಸಮೀಕ್ಷಾಕಾರರ ಮತ್ತು ರಾಜಕೀಯ ಪಂಡಿತರ ಊಹೆಗೂ ನಿಲುಕದ ಬದಲಾವಣೆಯೊಂದು ಈಗಷ್ಟೆ ತಮಿಳುನಾಡಿನಲ್ಲಿ ಆಗಿದೆ. ಸಂಪ್ರದಾಯಿಕ ರಾಜಕೀಯ ಪಕ್ಷಗಳ ಮೂಲಬೇರುಗಳನ್ನೇ ಅಲುಗಾಡಿಸುವ ಪ್ರಯೋಗವೊಂದು ಪ್ರಪಂಚದ ಅತಿದೊಡ್ಡ ಪ್ರಜಾತಂತ್ರದ ದೇಶದಲ್ಲಿ ಸಂಭವಿಸಿದೆ. ದುಡಿಯುವ ಕೈಗಳಿಗೆ ಸರಿಯಾದ ಸಮಯದಲ್ಲಿ ಉದ್ಯೋಗ ಮತ್ತು ಶಿಕ್ಷಣ ಸಿಗದೆ ಆಡಳಿತದಲ್ಲಿ ಬರೀ ಸೋಗಲಾಡಿತನವೇ ತುಂಬಿಕೊಂಡಿರುವಾಗ ನೊಂದ ಮತ್ತು ಆಕ್ರೋಶಭರಿತ ಮನಗಳು ಕಾಕ್ರೋಚ್ ಜನತಾ ಪಾರ್ಟಿ ರೂಪದಲ್ಲಿ ಹನಿಹನಿಗೂಡಿ ಭವಿಷ್ಯದಲ್ಲಿ ದೊಡ್ಡ ಹಳ್ಳವಾಗಿ ತಲೆಯೆತ್ತಿದ್ದರೆ ಅತಿಶಯವಿಲ್ಲ.


