Menu

ಕೋರ್ಟ್ ನಿರ್ದೇಶನದಂತೆ ಜಿಬಿಎ ಪಾಲಿಕೆಗಳ ಚುನಾವಣೆ: ಡಿಕೆ ಶಿವಕುಮಾರ್

“ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಕೋರ್ಟ್ ನಿರ್ದೇಶನದ ಪ್ರಕಾರ ನಡೆಯುತ್ತದೆ” ಎಂದು  ಡಿಕೆ ಶಿವಕುಮಾರ್ ಹೇಳಿದ್ದಾರೆ. ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಬುಧವಾರ ಪ್ರತಿಕ್ರಿಯೆ ನೀಡಿದರು. ಜಿಬಿಎ ಚುನಾವಣೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.

ಈ ವರ್ಷ ಜಿಬಿಎ ಆದಾಯದ ನಿರೀಕ್ಷೆ ಏನಿದೆ ಎಂದು ಕೇಳಿದಾಗ, “ಆದಾಯ ಬರಲಿ ನೋಡೋಣ. ನಾವು ಆದಾಯದ ಲೆಕ್ಕ ಹಾಕುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕು ರಕ್ಷಣೆ ಮಾಡಬೇಕು. ‘ಚಿನ್ನ ಖರೀದಿ ಮಾಡಬೇಡಿ, ಇಂಧನ ಬಳಕೆ ಕಡಿಮೆ ಮಾಡಿ, ವಿದೇಶ ಪ್ರಯಾಣ ಬೇಡ’ ಎಂದು ಹೇಳುವ ಕಷ್ಟ ಕಾಲದಲ್ಲಿ ಜನರಿಗೆ ಒಳ್ಳೆಯದಾಗಬೇಕು” ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ನೀಟ್ ಪರೀಕ್ಷೆ ರದ್ದಾಗಿರುವ ಬಗ್ಗೆ ಕೇಳಿದಾಗ, “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ದೇಶಕ್ಕೆ ದೊಡ್ಡ ಅಪಮಾನವಾಗಿದ್ದು, ಕೇಂದ್ರ ಸಚಿವರು ಹಾಗೂ ಸಂಸದರು ಇದಕ್ಕೆ ಉತ್ತರಿಸಬೇಕು. ಇದೇ ಪ್ರಕರಣ ನಮ್ಮ ರಾಜ್ಯದಲ್ಲಿ ಆಗಿದ್ದರೆ ಇಷ್ಟು ಹೊತ್ತಿಗೆ ನಮ್ಮ ಮೇಲೆ ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ಅನೇಕ ಕನಸು ಕಟ್ಟಿಕೊಂಡು ಕಷ್ಟಪಟ್ಟಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶಗೊಂಡಿದ್ದಾರೆ” ಎಂದು ತಿಳಿಸಿದರು.

‘ಬಿ’ ಯಿಂದ ‘ಎ’ ಖಾತೆ: 100 ದಿನದಲ್ಲಿ ಶುಲ್ಕ ಪಾವತಿಸಿದರೆ ಶೇ.60 ರಿಯಾಯಿತಿ

“ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾದ ‘ಭೂ ಗ್ಯಾರಂಟಿ’ ಮೂಲಕ ಬೆಂಗಳೂರು ನಾಗರಿಕರಿಗೆ ‘ಇ’ ಖಾತಾ ವಿತರಣೆ, ಕಟ್ಟಡ ಉಲ್ಲಂಘನೆ ವಿನಾಯಿತಿ ಮಿತಿ ಶೇ.5 ರಿಂದ ಶೇ.15 ಕ್ಕೆ ಹೆಚ್ಚಳ, 100 ದಿನದಲ್ಲಿ ‘ಎ’ ಯಿಂದ ‘ಬಿ’ ಖಾತಾ ಶುಲ್ಕ ಪಾವತಿಸಿದರೆ ಶೇ. 60 ರಷ್ಟು ರಿಯಾಯಿತಿ, ಶಿವರಾಂ ಕಾರಂತ ಬಡಾವಣೆಯ ಭೂ ಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ, ʼಗ್ರೀನ್ ಬೆಂಗಳೂರುʼ ಕಾರ್ಯಕ್ರಮ, ಬಿಡಿಎ ಮನೆಗಳ ಮಾರಾಟ ಸೇರಿದಂತೆ ಬೆಂಗಳೂರಿನ ನಾಗರಿಕರಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಬಂಪರ್ ಕೊಡುಗೆಯಾಗಿ ಘೋಷಿಸಲಾಗಿದೆ.

ಡಿಸಿಎಂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೇಂದ್ರ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿ  ನಾಗರಿಕಸ್ನೇಹಿ ಘೋಷಣೆಗಳನ್ನು ಮಾಡಿದರು. ಬಿ’ ಖಾತೆಯಿಂದ ‘ಎ’ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದವರು ದಾಖಲೆಗಳನ್ನು ಸರಿಯಾಗಿ ನೀಡಿದ್ದರೆ ಈಗ ಗೈಡೆನ್ಸ್ ವ್ಯಾಲ್ಯೂನ ಶೇ. 5 ರಷ್ಟನ್ನು ಕಟ್ಟಬೇಕಿದೆ. ಆದರೆ 100 ದಿನಗಳ ಒಳಗಾಗಿ ಶುಲ್ಕ ಪಾವತಿಸಿದರೆ ಶೇ. 2 ರಷ್ಟು ಕಟ್ಟಿದರೆ ಸಾಕು. ಅಂದರೆ ಶೇ.60 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.  1 ಕೋಟಿ ಆಸ್ತಿಯ ಬೆಲೆ ಇದ್ದರೆ 5 ಲಕ್ಷ ಶುಲ್ಕ ಪಾವತಿ ಮಾಡಬೇಕಿತ್ತು. ಈಗ 2 ಲಕ್ಷ ಕಟ್ಟಿದರೆ ಸಾಕು. ಇದರಿಂದ 7 ಲಕ್ಷ ಆಸ್ತಿ ಮಾಲೀಕರಿಗೆ ಉಪಯೋಗವಾಗಲಿದೆ ಎಂದರು.

“100 ದಿನಗಳಲ್ಲಿ ಇದರ ಉಪಯೋಗ ಪಡೆಯಲಿಲ್ಲ ಎಂದರೆ ನಂತರ ಶೇ.5 ರಷ್ಟೇ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಪ್ರತಿಯೊಂದು ಆಸ್ತಿ ದಾಖಲೆಗಳಲ್ಲಿ ಜಿಪಿಎಸ್, ಮಾಲೀಕರ ಫೋಟೋ ಇರುತ್ತದೆ. ಒಂದೇ ಒಂದು ರೂಪಾಯಿ ಲಂಚ ಇಲ್ಲದಂತೆ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆನ್ ಲೈನ್ ಅಲ್ಲೂ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದು ಹೇಳಿದರು.

‘ನನ್ನ ಖಾತೆ, ನನ್ನ ಹಕ್ಕು’ ಅಭಿಯಾನ ಮೂರು ತಿಂಗಳ ಕಾಲ ಶನಿವಾರ ನಡೆಯಲಿದೆ. “ಪ್ರತಿ ಶನಿವಾರ ಬೆಂಗಳೂರಿನ ಐದು ಪಾಲಿಕೆಗಳ ವ್ಯಾಪ್ತಿಯಲ್ಲಿ ತಲಾ 10 ರಂತೆ 50 ಸ್ಥಳಗಳಲ್ಲಿ ಈ ಅಭಿಯಾನ (ಇ-ಖಾತಾ ಸಿಟಿಜನ್ ಓಪನ್ ಹೌಸ್) ಕಾರ್ಯಕ್ರಮ ನಡೆಯಲಿದೆ. ಮೇ 16 ರಿಂದ ಇದಕ್ಕೆ ಚಾಲನೆ ನೀಡಲಾಗುವುದು. ಬೆಳಿಗ್ಗೆ 10 ಕ್ಕೆ ಪ್ರಾರಂಭವಾಗಿ ಸಂಜೆವರೆಗೆ ನಡೆಯುವ ಈ ಅಭಿಯಾನದ ಸ್ಥಳಗಳನ್ನು ಮುಂಚಿತವಾಗಿ ತಿಳಿಸಲಾಗುವುದು ಎಂದರು.

“ನಾವು ಜಾರಿಗೆ ತಂದಿರುವ ‘ಇ’ ಖಾತಾ ಆಂದೋಲನ ಭಾರತದ ಅತಿದೊಡ್ಡ ಸಮಗ್ರ ಡಿಜಿಟಲ್ ನಗರ ಆಸ್ತಿ ದಾಖಲೆ ವ್ಯವಸ್ಥೆಯಾಗಿದ್ದು , 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಆನ್ಲೈನ್ ಮೂಲಕ ನೇರವಾಗಿ ನಾಗರಿಕರ ಕೈಗೆ ತಲುಪಿಸಿದೆ. ಹಳೆಯ, ಅಸ್ಪಷ್ಟ ಹಾಗೂ ಕೈಪಿಡಿ ವ್ಯವಸ್ಥೆಯನ್ನು https://BBMPeAasthi.karnataka.gov.in ರಲ್ಲಿ ಪಡೆದುಕೊಳ್ಳಬಹುದು” ಎಂದರು.

“ಕಟ್ಟಡದ ಉಲ್ಲಂಘನೆ ವಿನಾಯಿತಿ ಮಿತಿಯನ್ನು (ಎತ್ತರ, ಎಫ್ ಎಆರ್, ಸೆಟ್ ಬ್ಯಾಕ್) ಶೇ.5 ರ ಬದಲಾಗಿ ಶೇ.15 ಕ್ಕೆ ಹೆಚ್ಚಿಸಲಾಗಿದೆ. ಶೇ.15 ರಷ್ಟು ಪ್ರಮಾಣದ ಉಲ್ಲಂಘನೆಗಳಿಗೆ ದಂಡ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ. ಸುಪ್ರೀಂ ಕೋರ್ಟ್ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯ ಒದಗಿಸಬಾರದೆಂದು ಆದೇಶಿಸಿದೆ. ಈ ಸಮಸ್ಯೆ ನಿವಾರಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದರ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ ಎಂದು ಹೇಳಿದರು.

2020 ರಲ್ಲಿ ಬಿಜೆಪಿ ಸರ್ಕಾರ ’38 ಡಿ’ ಎನ್ನುವ ಕಾನೂನು ಜಾರಿಗೆ ತಂದಿತ್ತು. 1 ಲಕ್ಷಕ್ಕೂ ಹೆಚ್ಚು ಜನ ಬಿಡಿಎ ಲೇಔಟ್ ಗಳಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು. ಇದರಲ್ಲಿ 570 ಜನ ಮಾತ್ರ ಅರ್ಜಿ ಸಲ್ಲಿಸಿದ್ದರು. ಈಗ ಅರ್ಜಿ ಹಾಕಲು ಜೂನ್ 15 ರಿಂದ ಒಟ್ಟು ಮೂರು ತಿಂಗಳ ಕಾಲ ಅವಕಾಶ ಕಲ್ಪಿಸಿಕೊಡಲಾಗುವುದು. ಓಟಿಎಸ್ ಜಾರಿ ಮಾಡಲಾಗುವುದು. ಮೊದಲ 100 ದಿನ ಅರ್ಜಿ ಸಲ್ಲಿಸಲು, 100 ದಿನ ಅರ್ಜಿ ಪರಿಶೀಲನೆಗೆ, ನಂತರ ಪಾವತಿಗೆ ಅವಕಾಶ ನೀಡಲಾಗವುದು. 1 ವರ್ಷ ಕಾಲಮಿತಿಯೊಳಗೆ ಅಂದರೆ 2027 ರ ಜೂನ್ ಗೆ ಈ ಯೋಜನೆ ಮುಕ್ತಾಯ  ಎಂದರು.

ಮೂರು ತಿಂಗಳ ಒಳಗೆ ಅರ್ಜಿ ಸಲ್ಲಿಸಿದವರು ಶೇ 10 ರ ಬದಲು ಶೇ. 5 ರಷ್ಟು ಮಾತ್ರ ಪಾವತಿ ಮಾಡಬಹುದು. ಅವರಿಗೆ ಶೇ.50 ರಷ್ಟು ರಿಯಾಯಿತಿ ದೊರೆಯಲಿದೆ. ಕಾನೂನಿನ ಚೌಕಟ್ಟಿನಲ್ಲಿಯೇ ರಿಯಾಯಿತಿ ನೀಡಲಾಗಿದೆ. ಗೈಡೆನ್ಸ್ ವ್ಯಾಲ್ಯೂ ಪೈಕಿ ಶೇ. 25 ಇರುವ ಕಡೆ ಶೇ 12.5, ಶೇ.40 ಇರುವ ಕಡೆ ಶೇ.20 ರಷ್ಟು, ಶೇ.50 ಇರುವ ಕಡೆ ಶೇ.25 ರಷ್ಟು ರಿಯಾಯಿತಿ ನೀಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಯವರು ಸೇರಿದಂತೆ ಸಚಿವರ ಬಳಿಯೂ ಚರ್ಚೆ ನಡೆಸಲಾಗಿದೆ” ಎಂದರು.

ವೈಟ್ ಫೀಲ್ಡ್ ನಲ್ಲಿ 1,900 ಮನೆಗಳನ್ನು ಕಟ್ಟಲಾಗಿದೆ. 1 ಬಿಎಚ್ ಕೆ ಮನೆ 760 ಚದರ ಅಡಿಯಿದೆ. ಇದನ್ನು 6,686 ರೂಪಾಯಿಗೆ ನೀಡಲಾಗುತ್ತಿದೆ. ಇದಕ್ಕೆ ಮೇ 15 ನೇ ತಾರೀಕಿನಿಂದ ಅರ್ಜಿ ಕರೆಯಲಾಗುತ್ತಿದೆ. 1,733 ಚದರ ಅಡಿಯ 3 ಬಿಎಚ್ ಕೆ ಮನೆಗಳಿಗೆ 8,309 ರಂತೆ 1.44ಕೋಟಿ ರೂಪಾಯಿಗೆ ನೀಡಲಾಗುತ್ತಿದೆ.ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 631 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ 10.77 ಕಿಮೀ ಉದ್ದದ ರಸ್ತೆಯನ್ನು15 ದಿನಗಳಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ಈ ರಸ್ತೆ ನೋಡಿದರೆ ಎಲ್ಲರಿಗೂ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದರು.

ಬಿಡಿಎ ಸಂಸ್ಥೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಹೇಳಿದಾಗ, “ಅದನ್ನು ನಾವು ಸರಿ ಮಾಡುತ್ತಿದ್ದೇವೆ” ಎಂದರು. ಖಾತೆಯನ್ನು ವಿಪಕ್ಷಗಳು ಅಧಿಕಾರಕ್ಕೆ ಬಂದರೆ ಉಚಿತವಾಗಿ ಮಾಡಿಕೊಡುತ್ತೇವೆ ಎಂದು ಹೇಳಿರುವ ಬಗ್ಗೆ ಕೇಳಿದಾಗ, “ಯಾರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರು ಬರಲೂ ಇಲ್ಲ, ಬರುವುದೂ ಇಲ್ಲ” ಎಂದು ಉತ್ತರಿಸಿದರು.

ಕಸದ ಟೆಂಡರ್ ನಲ್ಲಿ ಭ್ರಷ್ಟಾಚಾರವಾಗಿದೆ ಎನ್ನುವ ಬಗ್ಗೆ ಕೇಳಿದಾಗ, ಇದು ದೊಡ್ಡ ಮಾಫಿಯಾವಿದೆ. ವಿಪಕ್ಷಗಳನ್ನು ಇವರುಗಳು ಉಪಯೋಗಿಸಿಕೊಳ್ಳುತ್ತಿದ್ದಾರೆ. 15-20 ವರ್ಷಗಳಿಂದ ಟೆಂಡರ್ ಮಾಡಲು ಬಿಟ್ಟಿಲ್ಲ. ಇದಕ್ಕೆಲ್ಲಾ ಅವಕಾಶ ನೀಡುವುದಿಲ್ಲ. ನಾವು ಕಾನೂನು ಪ್ರಕಾರ ನಡೆಯುತ್ತೇವೆ. ಅಧಿಕಾರಿಗಳು, ನನ್ನ ಮೇಲೆ ಎಲ್ಲರ ಮೇಲೂ ಆರೋಪ ಮಾಡುತ್ತಾರೆ. ಮಾಫಿಯಾಗಳು ತಿಂದು ರೂಢಿ ಮಾಡಿಕೊಂಡಿವೆ ಎಂದರು.

Related Posts

Leave a Reply

Your email address will not be published. Required fields are marked *