Menu

ಜಾತ್ರಾ ಮಹೋತ್ಸವದ ಸಮಾರೋಪದಲ್ಲಿ ಭಾವುಕರಾಗಿ‌ ಕಣ್ಣೀರು ಹಾಕಿದ ಗವಿಶ್ರೀಗಳು

ಕೊಪ್ಪಳ:  ಗವಿಮಠದ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಶ್ರೀಮಠದ ಗವಿಶ್ರೀಗಳು ಭಾವುಕರಾಗಿ‌ ಕಣ್ಣೀರು ಹಾಕಿದ ಘಟನೆ ಶುಕ್ರವಾರ ರಾತ್ರಿ ಕೈಲಾಸಮಂಟಪದ ವೇದಿಕೆಯಲ್ಲಿ ನಡೆಯಿತು.

ಕೊಪ್ಪಳದ ನೂತನ ರೈಲು ನಿಲ್ದಾಣಕ್ಕೆ ಹೆಸರಿಡುವ ವಿಚಾರದಲ್ಲಿ ಗವಿಸಿದ್ಧೇಶ್ವರ ಹೆಸರಿನ ಜೊತೆ ಬೇರೆ ಬೇರೆ ಹೆಸರುಗಳ ಪೊಸ್ಟ್‌ಗಳು ಓಡಾಡುತ್ತಿವೆ. ದಯವಿಟ್ಟು ರೈಲ್ವೆ ನಿಲ್ದಾಣ ಆಗಲಿ, ವಿಮಾನ ನಿಲ್ದಾಣ ಆಗಲಿ, ವಿಶ್ವವಿದ್ಯಾಲಯ ಏನೇ ಆಗಲಿ ಗವಿಶ್ರೀ ಹೆಸರಿಡುವ ಬಗ್ಗೆ ಯಾರು ಕೇಳಬೇಡಿ. ಪೊಸ್ಟ್ ಮಾಡಬೇಡಿ. ಮಠ ಮತ್ತು ಮಠದ ಮೈದಾನಕ್ಕೆ ಮಾತ್ರ ಈ ಹೆಸರು ಸೀಮಿತವಾಗಿರಲಿ. ನಿಮ್ಮೆಲ್ಲರ ಮನದಾಳದಲ್ಲಿ ಗವಿಸಿದ್ಧನೇ ನೆಲೆಸಿರುವಾಗ, ನಿಮ್ಮ ಉಸಿರಿರುವಾಗ ಹೆಸರಿನ ಉಸಾಬರಿ ಬೇಡವೆಂದು ಭಾವುಕರಾಗಿ ಮನವಿ ಮಾಡಿದರು.

ಬೇರೆ ಮಠಗಳಿಗೆ ಮತ್ತು ಬೇರೆ ಸ್ವಾಮೀಜಿಗಳಿಗೆ ಹೋಲಿಕೆ ಮಾಡಿ ಪೊಸ್ಟ್‌ಗಳನ್ನು ಹಂಚಬೇಡಿ. ಅವು ಪೊಸ್ಟ್ ಅಲ್ಲ, ಪೊಸ್ಟ್ ಮಾಟಂ ಥರಾ ಭಾಸವಾಗ್ತವೆ. ನಾನು ಎಲ್ಲೂ ನನ್ನ ಫೋಟೋ ಹಾಕಲ್ಲ. ಮಠದಲ್ಲೂ ನನ್ನ ಫೋಟೋ ಇಲ್ಲ. ನನ್ನ ಮಾಲಕರಾದ ಶಿವಶಾಂತವೀರ ಮಹಾಸ್ವಾಮಿಗಳ ಫೋಟೊ ಇದೆ. ಆಳುಮಗನಂತೆ ನಿಮ್ಮ ಸೇವೆ ಮಾಡುವಂತೆ ಅವರು ಮಾರ್ಗದರ್ಶನ ಮತ್ತು ಆದೇಶವಿದೆ ಎಂದು ಹೇಳಿದರು.

ಪ್ರಶಸ್ತಿಗಳ ವಿಚಾರದಲ್ಲೂ ನನ್ನ ಹೆಸರು ಎಳೆಯಬೇಡಿ. ನನಗಿನ್ನೂ ಪ್ರಶಸ್ತಿಗೆ ಅರ್ಹತೆ ಇಲ್ಲ. ನಿಮ್ಮ ಹೃದಯದಲ್ಲಿ ನನಗೆ ಜಾಗ ಸಿಕ್ಕಿರುವುದೇ ದೊಡ್ಡ ಪ್ರಶಸ್ತಿ ಎಂದು ಭಾವುಕರಾಗಿ ಜನರಲ್ಲಿ ಮನವಿ ಮಾಡಿದರು.

Related Posts

Leave a Reply

Your email address will not be published. Required fields are marked *